ನರಗುಂದದ ಮೇಲ್ಸೇತುವೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಗುರುವಾರ ಪುರಸಭೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು.
ನರಗುಂದ: ಪಟ್ಟಣದ ಶಿವಾಜಿ ವರ್ತುಲದಲ್ಲಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಮೇಲ್ಸೇತುವೆಯಲ್ಲಿ ಬ್ಯಾನರ್ (BANNER) ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಪುರಸಭೆ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದ ಘಟನೆ ಗುರುವಾರ ನಡೆಯಿತು.
ಏನಿದು ಘಟನೆ: ಫ್ಲೈ ಓವರ್‌ನಲ್ಲಿ ಬ್ಯಾನರ್ ಅಳವಡಿಸಲು ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಶ್ರೀ ವಿವೇಕಾನಂದ ಸಿಬಿಎಸ್‌ಇ ಶಾಲೆ ಹಾಗೂ ಶ್ರೀಸರಸ್ವತಿ ವಿದ್ಯಾನಿಕೇತನ ಶಾಲೆಗಳು ಪುರಸಭೆಗೆ ಅರ್ಜಿ ಸಲ್ಲಿಸಿದ್ದವು. ನಿಯಮಾನುಸಾರ ಮೊದಲಿಗೆ ಲಯನ್ಸ್ ಶಾಲೆ ಬಳಿಕ ವಿವೇಕಾನಂದ ಶಾಲೆಗೆ ಅವಕಾಶ ನೀಡಲಾಗಿದೆ. ಆದರೀಗ ವಿದ್ಯಾನಿಕೇತನ ಶಾಲೆಯವರು ಬ್ಯಾನರ್ ಅಳವಡಿಸಲು ಅಧಿಕಾರಿಗಳು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪುರಸಭೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು.
ವಿವೇಕಾನಂದ ಶಾಲೆ ಬ್ಯಾನರ್ ಕಟ್ಟುವ ಅವಧಿ ಮಕ್ತಾಯಗೊಂಡಿದೆ ಎಂದುಕೊಂಡು ಶ್ರೀ ವಿದ್ಯಾನಿಕೇತನ ಶಾಲೆಯವರು ಬುಧವಾರ ತಮ್ಮ ಶಾಲೆಯ ಬ್ಯಾನರ್ ಅಳವಡಿಸಿದ್ದರು. ಪುರಸಭೆ ಸಿಬ್ಬಂದಿ ಶ್ರೀ ವಿದ್ಯಾನಿಕೇತನ ಶಾಲೆ ಬ್ಯಾನರ್ ತೆರವುಗೊಳಿಸಿದ್ದರು. ಆದರೆ, ತಮ್ಮ ಬ್ಯಾನರ್ ಅನ್ನು ವಿವೇಕಾನಂದ ಶಾಲೆಯವರೇ ತೆರವುಗೊಳಿಸಿದ್ದಾರೆ ಎಂದು ಭಾವಿಸಿ ಆ ಶಾಲೆಯ ಬ್ಯಾನರ್ ಅನ್ನು ಕೆಲವರು ಹರಿದು ಹಾಕಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ವಾದ ಉಂಟಾಗಿತ್ತು.
ಇದಕ್ಕೆ ಸ್ಪಷ್ಟನೆ ನೀಡಿದ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರು, ಫ್ಲೈಓವರ್‌ಗೆ ಬ್ಯಾನರ್ ಅಳವಡಿಸಿರುವ ಶ್ರೀವಿವೇಕಾನಂದ ಶಾಲೆಯ ಅವಧಿ ಜೂ. 22ರಂದು ಮುಕ್ತಾಯಗೊಳ್ಳುತ್ತದೆ. ಜೂ.23 ರಿಂದ ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಬಸುರಡ್ಡಿ ರಾಯರಡ್ಡಿ, ಪಡಿಯಪ್ಪ ಕೊಳ್ಳಿಯವರ, ಪುಟ್ಟು ಭರಮಗೌಡ್ರ, ಮಂಜುನಾಥ ಅಣ್ಣಿಗೇರಿ, ಶ್ರೀಶೈಲ್ ಸೊಬರದ, ರಾಜುಗೌಡ ಅಡ್ನೂರ, ಪ್ರಸಾದ ಮುತ್ತಿನ, ಶಿವಾನಂದ ಬನಹಟ್ಟಿ, ಅಣ್ಣಪ್ಪಗೌಡ ಪಾಟೀಲ, ಭೀಮರಡ್ಡಿ ಮೇಟಿ, ಪ್ರವೀಣ ಮ್ಯಾಗೇರಿ, ದೊಡ್ಡಪ್ಪ ಮ್ಯಾಗೇರಿ, ಸಮೀರ ಹುಣಸೀಮರದ, ಇತರರಿದ್ದರು.