DODDAMETI ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ
ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ (DODDAMETI) ಅವರ ಸ್ಮಾರಕ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಘೋಷಿಸಿದ್ದ 9.5 ಕೋಟಿ ರೂ. ಅನುದಾನ ಸಂಬಂಧ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೊಡ್ಡಮೇಟಿ ಅವರ ಸ್ಮಾರಕ ಭವನ ನಿರ್ಮಾಣಕ್ಕೆ 9.5 ಕೋಟಿ ರೂ. ಅನುದಾನ ಘೋಷಿಸಿತು. ಈ ನಿರ್ಧಾರ ಜಕ್ಕಲಿ ಗ್ರಾಮ ಸೇರಿದಂತೆ ಗದಗ ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣವಾಗಲಿದೆ ಎಂಬ ಕನಸು ಕಂಡಿದ್ದರು. ಆದರೆ, ಕನಸು ಈವರೆಗೂ ನನಸಾಗಿಲ್ಲ. ಸ್ಮಾರಕ ನಿರ್ಮಾಣದ ಯಾವೊಂದು ಕಾರ್ಯವೂ ಪ್ರಗತಿ ಕಂಡಿಲ್ಲ. ಸರ್ಕಾರದ ಅನುದಾನ ಬಿಡುಗಡೆಯಾಗಿದೆಯೇ? ಅಥವಾ ಇಲ್ಲವೋ?. ಬಿಡುಗಡೆಯಾಗಿದ್ದರೆ ಯಾವ ಇಲಾಖೆಗೆ ಹಂಚಿಕೆಯಾಗಿದೆ? ಯೋಜನೆಯ ಪ್ರಸ್ತುತ ಹಂತ ಏನು? ಎಂಬ ಪ್ರಶ್ನೆಗಳಿಗೆ ಸ್ಪಷ್ಟತೆ ಸಿಗುತ್ತಿಲ್ಲ.
ಅಂದಾನಪ್ಪ ದೊಡ್ಡಮೇಟಿ ಅವರು ನಡೆಸಿದ ಹೋರಾಟ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ಮಹನೀಯರ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವುದು ಕನ್ನಡಿಗರ ಮನಸಿಗೆ ಬೇಸರ ಮೂಡಿಸಿದೆ. ಸ್ಮಾರಕ ನಿರ್ಮಾಣವಾದರೆ ಜಕ್ಕಲಿ ಗ್ರಾಮ ಐತಿಹಾಸಿಕ ತಾಣವಾಗಿ ಬೆಳೆಯುತ್ತದೆ. ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಇತಿಹಾಸಕ್ತರಿಗೆ ಅಧ್ಯಯನ ಕೇಂದ್ರವಾಗಿ ರೂಪುಗೊಳ್ಳುವುದರ ಜತೆಗೆ ಗ್ರಾಮೀಣ ಪ್ರವಾಸೋದ್ಯಮಕ್ಕೂ ಹೊಸ ಆಯಾಮ ದೊರೆಯಲಿದೆ.
ಕನ್ನಡ ಮತ್ತ ಸಂಸ್ಕೃತಿ ಇಲಾಖೆ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಅನುದಾನ ಬಿಡುಗಡೆ ಆಗಿದೆ. ಯೋಜನೆ ಟೆಂಡರ್ ಹಂತದದಲ್ಲಿದೆ.
-ಬಸವರಾಜ ಬಳ್ಳಾರಿ, ಸಹಾಯ ನಿರ್ದೇಶಕರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ