Temple land ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ಭಾಗದ ಮಹಾದ್ವಾರದ ಸಂರಕ್ಷಣಾ ಕಾಮಗಾರಿಗೆ ಸಚಿವ ಎಚ್.ಕೆ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.  
ಗದಗ

Temple land ದೇವಸ್ಥಾನಕ್ಕೆ ಜಾಗ ಬಿಡುವವರಿಗೆ ಬದಲಿ ವ್ಯವಸ್ಥೆ

ಲಕ್ಷ್ಮೇಶ್ವರ: ಸೋಮೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡು ದನಗಳ ಕೊಟ್ಟಿಗೆ, ತಿಪ್ಪೆಗುಡ್ಡೆ, ಬಣವಿ, ಶೌಚಗೃಹಗಳಿದ್ದು, ಅವು ವಾತಾವರಣ ಕೆಡಿಸುತ್ತಿವೆ. ದೇವಸ್ಥಾನದ ಅಭಿವೃದ್ಧಿಗೆ (Temple land) ನೀಡುವ ಜಾಗದ ಬದಲಾಗಿ ಅವರಿಗೆ ಸರ್ಕಾರದಿಂದ ಬದಲಿ ಜಾಗ, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಸಹಯೋಗದಲ್ಲಿ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ಮಹಾದ್ವಾರದ ಸಂರಕ್ಷಣಾ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 
ದೇವಸ್ಥಾನಗಳು ನಮ್ಮ ನೆಲದ ಶ್ರೀಮಂತ ಪರಂಪರೆ, ಇತಿಹಾಸ, ಸಂಸ್ಕೃತಿಯ ಪ್ರತೀಕವಾಗಿದ್ದು, ಅಲ್ಲಿ ಪಾವಿತ್ರ್ಯ, ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಾದ ಸುತ್ತಲಿನ ಜಾಗ ದೊರಕಿಸಬೇಕು. ಇದಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯ ಎಂದರು.
ಪಂಪಕವಿಯ ಕರ್ಮಭೂಮಿ ತಿರುಳ್ಗನ್ನಡ ನಾಡು, ಪುಲಿಗೆರೆಯ ಸೋಮೇಶ್ವರನ ನೆಲೆವೀಡು ಲಕ್ಷ್ಮೇಶ್ವರ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಮುಂಚೂಣಿಯಲ್ಲಿದೆ. ಈಗ ಸೋಮೇಶ್ವರ ಉತ್ತರ ಮಹಾದ್ವಾರದ ದುರಸ್ತಿಯ ಜತೆಗೆ ಜಲ ನಿರೋಧಕ ಹೊದಿಕೆ ಹಾಕುವುದು, ದೇವಾಲಯದ ಮೇಲ್ಛಾವಣಿ ದುರಸ್ತಿ ಸೇರಿದಂತೆ ಒಟ್ಟು 12 ಕಾಮಗಾರಿ ಮಾಡಬೇಕಾಗಿದೆ. ಪುನರ್ ನಿರ್ಮಾಣ ಕೆಲಸವು ಅಚ್ಚುಕಟ್ಟಾಗಿ ನಡೆಯಬೇಕು. ಸ್ಯಾಂಡ್ ಪ್ಲಾಸ್ಟರಿಂಗ್ ಮಾಡಲು ಅವಶ್ಯ ಇದ್ದರೆ ಮಾಡಿ ಎಂದು ಸೂಚನೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೊಳಪಟ್ಟ ಶ್ರೀ ಸೋಮೇಶ್ವರ ದೇವಸ್ಥಾನದ ಸಂರಕ್ಷಣೆಗಾಗಿ 2.40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಉಳಿದಂತೆ ಸಮಗ್ರ ಅಭಿವೃದ್ಧಿಗಾಗಿ ಅಗತ್ಯ ಅನುದಾನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ ಗದಗ ಜಿಲ್ಲೆ ಐತಿಹಾಸಿಕವಾಗಿ, ಧಾರ್ಮಿಕವಾಗಿ ಹೆಸರಾಗಿದೆ. ಸೋಮೇಶ್ವರ ದೇವಾಲಯದ ಸುತ್ತಲೂ ಇರುವ ಮನೆಗಳ ಮಾಲೀಕರು ಮೂಲ ಸ್ಥಳವನ್ನು ದೇವಾಲಯದ ಭಾಗಕ್ಕೆ ಬಿಟ್ಟು ಕೊಟ್ಟಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯ. ಪುರಾತನ ದೇವಾಲಯ ಕಾಪಾಡುವ ಕೆಲಸ ಆಗಬೇಕಾಗಿದೆ. ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಸಚಿವರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳು ಹೆಚ್ಚೆಚ್ಚು ಅಭಿವೃದ್ಧಿ ಆಗಲಿ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ , ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಆನಂದ ಗಡ್ಡದೇವರಮಠ, ಶ್ರೀ ಸೋಮೇಶ್ವರ ಭಕ್ತರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ,  ಅರ್ಚಕರ ಸಮಿತಿ ಅಧ್ಯಕ್ಷ ದಿಗಂಬರ ಪೂಜಾರ, ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಗುರುನಾಥ ದಾನಪ್ಪನವರ, ಸುನೀಲ ಮಹಾಂತಶೆಟ್ಟರ, ಡಾ.ಬಸವರಾಜ ಬೊಮ್ಮನಳ್ಳಿ, ಎಸ್.ಪಿ. ಬಳಿಗಾರ, ಸಿದ್ದಲಿಂಗೇಶ ಪಾಟೀಲ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಇಂಜಿನಿಯರ್ ಸುವರ್ಣ ಕ್ಷೀರಸಾಗರ, ಗುತ್ತಿಗೆದಾರ ಎಸ್.ವಿ. ಹಿರೇಮಠ ಉಪಸ್ಥಿತರಿದ್ದರು.