ಗದಗ

ಪ್ರಜಾಪ್ರಭುತ್ವದ ಜೊತೆಗೆ ನಮ್ಮ ಧರ್ಮ ಮತ್ತು ಸಂಸ್ಕೃತಿಯೂ ಇದೆ: ಬಸವರಾಜ ಬೊಮ್ಮಾಯಿ

ದಸರಾ ಹಬ್ಬದ ವಿಶೇಷ: ದುಷ್ಟ ಶಕ್ತಿಗಳ ಸಂಹಾರದೊಂದಿಗೆ ಶಿಷ್ಟರ ಪರಿಪಾಲನೆಯಾಗಲಿ

​ಗದಗ: ದಸರಾ ಹಬ್ಬವು ನಮ್ಮ ಹಿಂದುಗಳಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದ್ದು, ಜಗನ್ಮಾತೆಯು ಒಂಬತ್ತು ದಿವಸಗಳಲ್ಲಿ ಒಂಬತ್ತು ಅವತಾರಗಳ ಮೂಲಕ ಒಂಬತ್ತು ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿ, ಹತ್ತನೇ ದಿವಸ ವಿಜಯದಶಮಿ ಉತ್ಸವದ ಮುಖಾಂತರ ದುಷ್ಟರನ್ನು ಸಂಹರಿಸಿ ಶಿಷ್ಟರ ಪರಿಪಾಲನೆ ಮಾಡುವಂತಹ ಹಬ್ಬದ ವೈಶಿಷ್ಟ್ಯ ಇದಾಗಿದೆ ಎಂದು ಮಾಜಿ  ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. 

ಇಂದು ಗದಗ ನಗರದ ಸರಾಫ ಬಜಾರನಲ್ಲಿರುವ ಶ್ರೀ ಅಂಭಾಭವಾನಿ ದೇವಸ್ಥಾನಕ್ಕೆ  ದಸರಾ ಹಬ್ಬದ ಪ್ರಯುಕ್ತ ಭೇಟಿ ನೀಡಿ ದೇವಿಯ ದರ್ಶನಾಶೀರ್ವಾದ ಪಡೆದುಕೊಂಡು ಮಾತನಾಡಿದರು.  ಜಗನ್ಮಾತೆ ಮಹಾತಾಯಿ ಈ ಭೂಮಂಡಲದ ಸೃಷ್ಟಿಕರ್ತೆ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಸೃಷ್ಟಿ ಮಾಡಿದ ಮಹಾತಾಯಿಯ ಆರಾಧನೆ ಮಾಡುವುದರ ಮುಖಾಂತರ ನಾವೆಲ್ಲರೂ ಪುಣ್ಯ ಪ್ರಾಪ್ತಿಯನ್ನು ಮಾಡಿಕೊಳ್ಳಬೇಕು ಎಂದರು.   

​ದುಷ್ಟ ಶಕ್ತಿಗಳ ವಿರುದ್ಧ ಎಚ್ಚರಿಕೆ* ಹಿಂದೆಯೂ  ದೈತ್ಯರು ಇದ್ದರು, ದೈತ್ಯ ಸಂಹಾರ ಆಯಿತು. ಆದರೆ ಇವತ್ತು ದೈತ್ಯರನ್ನು ಮೀರಿಸುವಂತಹ ವಿಚಾರಗಳು ಹಾಗೂ ಮನಃಕುಲವನ್ನೇ ನಾಶ ಮಾಡುವಂತಹ ದುಷ್ಟ ಶಕ್ತಿಗಳು ವಿಶೇಷವಾಗಿ ಭಾರತ ವರ್ಷದ ಮೇಲೆ ಕಣ್ಣಿಟ್ಟಿವೆ ಎಂದರು.

ನಮ್ಮಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಜೊತೆಗೆ ನಮ್ಮ ಧರ್ಮ ಮತ್ತು ಸಂಸ್ಕೃತಿಯೂ ಇದೆ. ಸಂಸ್ಕೃತಿಯ ಆಧಾರಿತವಾಗಿರುವ ಆಚಾರ-ವಿಚಾರಗಳೇ ಸಂವಿಧಾನದ ಆಧಾರದ ಮೇಲೆ ನಮ್ಮೆಲ್ಲರ ಬದುಕಿಗೆ ದಾರಿಯಾಗಿದೆ. ಭಾರತ ದೇಶವನ್ನು ಉಳಿಸಿ ಬೆಳೆಸುವ ಶಕ್ತಿ ನಮ್ಮ ದೇಶದ ಪ್ರಧಾನಿಗಳಿಗಿದ್ದು, ಅವರಿಗೆ ಆ ಶಕ್ತಿಯನ್ನು ತುಂಬಲಿ ಹಾಗೂ ಶಿಷ್ಟರ ಪರವಾಗಿ ಶಕ್ತಿಯನ್ನು ತುಂಬಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ​ಈ ಬಾರಿಯ ದಸರಾವನ್ನು ಅರ್ಥಪೂರ್ಣವಾಗಿ ನಾವೆಲ್ಲರೂ ಸೇರಿ ಆಚರಣೆ ಮಾಡೋಣ ಎಂದು ಬೇಡಿಕೊಳ್ಳುತ್ತಾ, ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ, ಐಶ್ವರ್ಯ ಮತ್ತು ಮನೋಕಾಮನೆಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. 

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ  ರಾಜು ಕುರಡಗಿ, ಶಾಸಕರಾದ ಡಾ.ಚಂದ್ರು ಲಮಾಣಿ, ಮುಖಂಡರಾದ  ಜಯತೀರ್ಥ ಕಟ್ಟಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.