ನರೇಗಲ್ಲನ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣೆ ಮಾತ್ರೆ ವಿತರಿಸಲಾಯಿತು. ಎಸ್.ಡಿ. ಬೆನ್ನೂರ, ಮಂಜುನಾಥ ಜಾಲಿಹಾಳ, ಸಂಗೀತಾ ಮುಚ್ಚಖಂಡಿ, ವಿಜಯಲಕ್ಷ್ಮೀ ಪೋಲಿಸಪಾಟೀಲ, ರೇಷ್ಮಾ ಓಲೇಕಾರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ನರೇಗಲ್ಲ
ಮಕ್ಕಳ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತವೆ. ಆದ್ದರಿಂದ 1 ವರ್ಷದಿಂದ 19 ವರ್ಷದವರೆಗಿನ ಎಲ್ಲ ಮಕ್ಕಳು ಜಂತುಹುಳು ನಿವಾರಣೆ ಮಾತ್ರೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಿ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸೋಮವಾರ ಪಟ್ಟಣದ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಜಂತುಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ಎಷ್ಟೇ ಊಟ ಮಾಡಿದರೂ ತೂಕ ಹೆಚ್ಚಾಗದೆ ಇರುವುದು, ವಾಂತಿ, ನಿಶಕ್ತಿ, ಅತಿಸಾರ, ಓದಿನಲ್ಲಿ ಏಕಾಗ್ರತೆ ಕೊರತೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ 6 ತಿಂಗಳಿಗೊಮ್ಮೆ ಸರ್ಕಾರದಿಂದ ಉಚಿತವಾಗಿ ನೀಡುವ ಜಂತಿನ ಮಾತ್ರೆಗಳನ್ನು ಮಕ್ಕಳು ತಪ್ಪದೆ ಸೇವಿಸಬೇಕೆಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ ಮಾತನಾಡಿ, ಜಂತುಹುಳು ಆಗದಂತೆ ಮುಂಜಾಗ್ರತೆಗಾಗಿ ಊಟಕ್ಕೆ ಮುನ್ನ ಸಾಬೂನು ಬಳಸಿ ಸ್ವಚ್ಛವಾಗಿ ಕೈ ತೊಳೆಯುವುದು, ಚಪ್ಪಲಿ ಧರಿಸುವುದು, ಶೌಚಾಲಯ ಬಳಸುವುದು, ಆಗಾಗ್ಗೆ ಉಗುರುಗಳನ್ನು ಕತ್ತರಿಸಿಕೊಳ್ಳುವುದು, ಶುದ್ಧವಾದ ಕುಡಿಯುವ ನೀರನ್ನು ಬಳಕೆ ಮಾಡೋದು ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ಜಂತು ಹುಳುಗಳಿಂದ ಪಾರಾಗಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಂಗೀತಾ ಮುಚ್ಚಖಂಡಿ, ವಿಜಯಲಕ್ಷ್ಮೀ ಪೋಲಿಸಪಾಟೀಲ, ರೇಷ್ಮಾ ಓಲೇಕಾರ, ರೆಹಮತಬಾನು ಶರಭತ್ತವಾಲ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಅಕ್ಕಮಹಾದೇವಿ ಬಿಂಗಿ ಇತರರಿದ್ದರು.