ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ತಹಸೀಲ್ದಾರ್‌ಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.  
ಗದಗ

ACTION ಜನಿವಾರ ತೆಗೆಸಿದ ಸಿಬ್ಬಂದಿ ಮೇಲೆ ಕ್ರಮವಾಗಲಿ

ಲಕ್ಷ್ಮೇಶ್ವರ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ (ACTION) ಜನಿವಾರ (ಯಜ್ಞೋಪವೀತ)ವನ್ನು ಬಲವಂತವಾಗಿ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ರವಾನಿಸಲಾಯಿತು.
ವಿವಾಹಿತ ಹಿಂದೂ ಮಹಿಳೆಯರ ಮಂಗಳಸೂತ್ರ, ಕಾಲುಂಗುರ, ಮೂಗುತಿ, ಕಿವಿಯೋಲೆ, ಕೈದಾರ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಒತ್ತಾಯಿಸುವ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು. ಧರ್ಮಾಚರಣೆಯ ಮೇಲಿನ ದಾಳಿ ನೋವು ನೀಡಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ತಪಾಸಣೆ ನೆಪದಲ್ಲಿ ತಡೆದು, ಅವರು ಧರಿಸಿದ್ದ ಜನಿವಾರ ಬಲವಂತವಾಗಿ ತೆಗೆಸಲಾಗಿದೆ, ಜನಿವಾರ ತೆಗೆದಿಲ್ಲದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಪಾಲಕರು ಅನಿವಾರ್ಯವಾಗಿ ಜನಿವಾರ ತೆಗೆಸಿ ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಲಾಗಿದೆ. ಇದು ಸಂಪೂರ್ಣ ಹಿಂದೂ ಧಾರ್ಮಿಕ ಸಂಪ್ರದಾಯದ ಮೇಲೆ ನಡೆದ ಗಂಭೀರ ದಾಳಿ ಆಗಿದೆ ಎಂದು ಆರೋಪಿಸಲಾಗಿದೆ.
ಹಿಂದೆ ಜನಿವಾರ ತೆಗೆಸಿದ ಕ್ರಮವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಆದರೂ ಮತ್ತೆ ದುಷ್ಕೃತ್ಯ ಮರುಕಳಿಸಿರುವುದು ಆಡಳಿತದ ನಿರ್ಲಕ್ಷೃ. ಹಿಂದೂ ಧಾರ್ಮಿಕ ಹಕ್ಕುಗಳ ವಿರುದ್ಧದ ನಡೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಿವಾರ ತೆಗೆಸಿದ ಎಲ್ಲ ಪರೀಕ್ಷಾ ಕೇಂದ್ರಗಳ ವಿರುದ್ಧ ಸಂಪೂರ್ಣ ತನಿಖೆ ನಡೆಸಬೇಕು. ಸಿಬ್ಬಂದಿ, ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳ ಮಾನ್ಯತೆಯನ್ನು ರದ್ದು ಪಡಿಸುವ ಕುರಿತು ಗಂಭೀರ ಪರಿಶೀಲನೆ ನಡೆಸಬೇಕು. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.