ಶಿರಹಟ್ಟಿ ಪಟ್ಟಣದಲ್ಲಿ ಬಿಸಿಲಿನ (SUN) ತೀವ್ರತೆಯಿಂದ ರಕ್ಷಿಸಿಕೊಳ್ಳಲು ಮರದ ರೆಂಬೆ ಗಳನ್ನು ಹಿಡಿದುಕೊಂಡು ಸೆಟ್ರಿಂಗ್ ಕಾರ್ಯ ಮಾಡುತ್ತಿರುವ ಕಾರ್ಮಿಕ.
- ದಿನೇದಿನೆ ಏರುತ್ತಿದೆ ತಾಪಮಾನ
- ದಿನಗೂಲಿ ಕಾರ್ಮಿಕರ ಸ್ಥಿತಿ ಅಯೋಮಯ
- ಉರಿ ಬಿಸಿಲಿಗೆ ಜನ ಹೈರಾಣ
ಎಲ್ಲೆಡೆ ಸೂರ್ಯನ ಪ್ರತಾಪ ದಿನೇದಿನೆ ಏರುತ್ತಿದೆ. ನೆಲ ಕಾಯ್ದ ಕಬ್ಬಿಣದಂತಾಗಿದೆ. ಜನಸಾಮಾನ್ಯರು ಉರಿಬಿಸಿಲಿಗೆ ಅಕ್ಷರಶಃ ಹೈರಾಣಾಗಿದ್ದಾರೆ. ತಾಪಮಾನವೂ ಏರಿಕೆಯಾಗುತ್ತಿದೆ. ರಣಬಿಸಿಲಿನಿಂದ ರಕ್ಷಿಸಿಕೊಳ್ಳಲು ಕಾರ್ಮಿಕರು ಅದ್ಭುತವಾದ ಐಡಿಯಾವನ್ನು ಕಂಡುಕೊಂಡಿದ್ದಾರೆ. ಈ ಐಡಿಯಾ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಂಡು ನೆರಳಿನಲ್ಲಿಯೇ ಯಾವ ಸುಸ್ತು, ಆಯಾಸವಿಲ್ಲದೇ ಕೆಲಸ ಮಾಡುತ್ತಿದ್ದಾರೆ.
ನೆತ್ತಿ ಸುಡುವ ಬಿಸಿಲಿನಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ 9ಕ್ಕೆ ಆರಂಭವಾಗುವ ಬಿಸಿಲಿನ ತೀವ್ರತೆ ಸಂಜೆ 5ರವರೆಗೂ ಮುಂದುವರಿಯುತ್ತಿದ್ದು, ಮಧ್ಯಾಹ್ನದ ವೇಳೆಗೆ ರಸ್ತೆಗಳು ಕರ್ಫ್ಯೂ ಹೇರಿದಂತೆ ಭಣಗುಡುತ್ತಿವೆ!
ಬಿಸಿಲಿನ ಹೊಡೆತದಿಂದ ದಿನಗೂಲಿ ನೌಕರರು, ಗಾರೆ ಕೆಲಸಗಾರರು, ಸೆಟ್ರಿಂಗ್ ಕಾರ್ಮಿಕರು ಹಾಗೂ ರೈತರು ಸುಡುವ ಬಿಸಿಲಿನಲ್ಲೇ ದುಡಿಯಬೇಕಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಪ್ರಖರತೆ ತಪ್ಪಿಸಿಕೊಳ್ಳಲು ಶಿರಹಟ್ಟಿಯ ಹಲವೆಡೆ ಕಾರ್ಮಿಕರು ತಲೆಗೆ ಮರದ ತಪ್ಪಲು, ಟೊಂಗೆಗಳನ್ನು ಕಟ್ಟಿಕೊಂಡು ಅಥವಾ ಅರೆಬರೆ ನೆರಳಿನಲ್ಲೇ ಕಟ್ಟಡ ಕೆಲಸ ಮಾಡಬೇಕಾದ ಅನಿವಾರ್ಯ ಬಂದೊದಗಿದೆ.
ಪಂಕದ ಗಾಳಿಯೂ ಬಿಸಿ!: ಮನೆಯೊಳಗಿದ್ದವರಿಗೂ ಬಿಸಿಲಿನ ಬೇಗೆಯಿಂದ ಮುಕ್ತಿ ಇಲ್ಲದಂತಾಗಿದೆ. ತಂಪು ಗಾಳಿ ನೀಡಬೇಕಿದ್ದ ಫ್ಯಾನ್‌ಗಳು ಬಿಸಿ ಗಾಳಿ ಸೂಸುತ್ತಿವೆ. ಇದರಿಂದ ಮನೆಯೊಳಗೆ ಇರಲಾಗುತ್ತಿಲ್ಲ. ಬಹುತೇಕರು ಮರಗಳ ನೆರಳಿನ ಆಸರೆ ಹುಡುಕುವಂತಾಗಿದೆ. ಹಗಲಿ ನಲ್ಲಿ ಲೋಡ್ ಶೆಡ್ಡಿಂಗ್ ಕಾಟ ಹಾಗೂ ರಾತ್ರಿ ವೇಳೆ ಪದೇಪದೆ ವಿದ್ಯುತ್ ಕೈಕೊಡುವುದರಿಂದ ವೃದ್ಧರು ಮತ್ತು ಮಕ್ಕಳು ನಿದ್ದೆಯಿಲ್ಲದೆ ಪರಿತಪಿಸುವಂತಾಗಿದೆ.
ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲದ್ದರಿಂದ ಜನರು ಶುದ್ಧ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ದೂರದ ಊರುಗಳಿಂದ ಬರುವವರಿಗೆ ನೀರಿನ ಬಾಟಲಿ ಅಥವಾ ಪೌಚ್‌ಗಳನ್ನು ದುಬಾರಿ ಬೆಲೆಗೆ ಖರೀದಿಸುವ ಅನಿವಾರ್ಯ ಬಂದೊದಗಿದೆ.
ಇನ್ನೊಂದೆಡೆ, ಬಾಯಾರಿಕೆ ತಣಿಸಿಕೊಳ್ಳಲು ಎಳನೀರು, ಕಲ್ಲಂಗಡಿ, ಮಜ್ಜಿಗೆ ಹಾಗೂ ಹಣ್ಣಿನ ಜ್ಯೂಸ್‌ಗಳ ಮೊರೆ ಹೋಗುತ್ತಿರುವುದು ಅನಿವಾರ್ಯವೂ ಆಗಿದೆ. ಇದರಿಂದಾಗಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳು ರಾಶಿ ರಾಶಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಕಳೆದ ಒಂದು ವಾರದಿಂದ ಬಿಸಿಲು ವಿಪರೀತವಾಗಿದೆ. ತಾಲೂಕಾಡಳಿತ ಅಥವಾ ಪಟ್ಟಣ ಪಂಚಾಯಿತಿಯು ಜನರ ಅನುಕೂಲಕ್ಕಾಗಿ ಅಲ್ಲಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ತೆರೆಯುವ ಅಥವಾ ನೆರಳಿನ ವ್ಯವಸ್ಥೆ ಮಾಡುವ ಅಗತ್ಯವಿದೆ. ಸರ್ಕಾರಿ ಕಚೇರಿಗಳಿಗೆ ಬರುವ ಗ್ರಾಮೀಣ ಜನರು ನೆರಳಿಲ್ಲದೆ ಬಿಸಿಲಲ್ಲೇ ನಿಲ್ಲುವುದನ್ನು ತಪ್ಪಿಸಬೇಕು ಎಂಬುದು ಜನಸಾಮಾನ್ಯರ ಆಶಯವಾಗಿದೆ.
ಬಿಸಿಲಿನ ಹೊಡೆತದಿಂದ ಜನರನ್ನು ರಕ್ಷಿಸಲು ಕೆಲವು ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿದ್ದೇವೆ. ಜನರು ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಹೆಚ್ಚು ದ್ರವ ಹಾಗೂ ತೆಳ್ಳಗಿನ ಪದಾರ್ಥಗಳನ್ನು ಸೇವಿಸಬೇಕು.
— ಡಾ. ವೆಂಕಟೇಶ ರಾಠೋಡ, ಜಿಲ್ಲಾ ಸಮೀಕ್ಷಣಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಬಿಸಿಲು ಅಂತ ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ಈ ತಾಪದಲ್ಲೂ ಕೆಲಸ ಮಾಡುವುದು ಅನಿವಾರ್ಯ. ಕಾರ್ಮಿಕ ಇಲಾಖೆಯಿಂದ ನಮಗೆ ರಕ್ಷಣೆಗಾಗಿ ಕಿಟ್‌ಗಳನ್ನು ನೀಡಿದರೆ ಅನುಕೂಲವಾಗುತ್ತದೆ.
— ಮಾರುತಿ ಹರಿಜನ ಸೆಟ್ರಿಂಗ್ ಕೆಲಸಗಾರ