ಭೈರನಹಟ್ಟಿ ಸರ್ಕಾರಿ ಶಾಲೆ ಮಕ್ಕಳನ್ನು ಮರದ ಕೆಳಗಡೆ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿರುವುದು.
- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಚನೀಯ ಸ್ಥಿತಿ
- ಭೈರನಹಟ್ಟಿ ಸ್ವಾತಂತ್ರೃಪೂರ್ವದ ಶಾಲೆಗೆ ಮೂಲಸೌಲಭ್ಯ ಕೊರತೆ
- ಸೋರುವ ಕೊಠಡಿಯಲ್ಲೇ ಬೋಧನೆ
ಅದು ಸ್ವಾತಂತ್ರೃ ಪೂರ್ವದಲ್ಲೇ ಆರಂಭವಾದ ಶಾಲೆ. (SCHOOL) ಆರಂಭದ ದಿನಗಳಲ್ಲಿ ದೇವಸ್ಥಾನಗಳಲ್ಲಿ ಪಾಠ-ಪ್ರವಚನ ನಡೆಯುತ್ತಿದ್ದ ಕಾಲವದು. ಕ್ರಮೇಣ ಸರ್ಕಾರದ ಸಹಾಯದಿಂದ ಸ್ವಂತ ಕಟ್ಟಡ ಹೊಂದಿದ ಶಾಲೆಯ ಸ್ಥಿತಿ ಈಗ ಅಧೋಗತಿಗೆ ತಲುಪಿದೆ. ಇಲ್ಲಿ ಇತಿಹಾಸ ಮರುಕಳಿಸಿದ್ದು ದೇವಸ್ಥಾನದ ಬದಲು ಗಿಡದ ಕೆಳಗೆ ಮಕ್ಕಳನ್ನು ಕೂಡಿಸಿ ಪಾಠ ಮಾಡಲಾಗುತ್ತಿದೆ!
ಇದು ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಚನೀಯ ಸ್ಥಿತಿ. ಇಲ್ಲಿ ಕೊಠಡಿಗಳ ಕೊರತೆಯಿಂದಾಗಿ ಮಕ್ಕಳನ್ನು ಮರದ ಕೆಳಗಡೆ ಕೂರಿಸಿ ವಿದ್ಯಾಭ್ಯಾಸ ಮಾಡಿಸಲಾಗುತ್ತಿದೆ. ಮಳೆ ಬಂದರಂತೂ ಮಕ್ಕಳು-ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಾರೆ. ಸದ್ಯದ ಸ್ಥಿತಿಯಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ತೀವ್ರ ಪೆಟ್ಟು ಬೀಳುತ್ತಿದ್ದು, ಹೀಗೆಯೇ ಮುಂದುವರಿದರೆ ಮಕ್ಕಳ ಭವಿಷ್ಯ ಹೇಗೆ ಎನ್ನುವ ಚಿಂತೆ ಪಾಲಕರನ್ನು ಕಾಡುತ್ತಿದೆ.
1938ರ ಪ್ರಾರಂಭದ ದಿನಗಳಲ್ಲಿ ವಿವಿಧ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭೈರನಹಟ್ಟಿಯ ಶಾಲೆಗೆ 1965ರಲ್ಲಿ ಸ್ವಂತ ಕಲ್ಲಿನ ಕಟ್ಟಡ ನಿರ್ಮಿಸಲಾಯಿತು. 12 ಗುಂಟೆ ವಿಸ್ತೀರ್ಣದಲ್ಲಿ ನಿಮಿರ್ರ್ಸಲಾದ 7 ಕೊಠಡಿಗಳಲ್ಲಿ 1 ರಿಂದ 7ನೇ ತರಗತಿ ನಡೆಸಲಾಗುತ್ತಿದೆ. ಪ್ರಸ್ತುತ 231 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 7ರಲ್ಲಿ 1 ಕೊಠಡಿಯ ಗೋಡೆ ಬಿದ್ದು ಸಂಪೂರ್ಣ ಶಿಥಿಲಗೊಂಡಿದೆ. 1 ಕೊಠಡಿಯಲ್ಲಿ ಮುಖ್ಯೋಪಾಧ್ಯಾಯರು ಕಾರ್ಯ ನಿರ್ವಹಿಸುತ್ತಾರೆ. ಇನ್ನುಳಿದ 5 ಕೊಠಡಿಗಳಲ್ಲಿ 7 ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲ, ಮಳೆಗಾಲದಲ್ಲಿ ಎಲ್ಲ ಕೊಠಡಿಗಳು ಸೋರುತ್ತವೆ. ಮಳೆಯ ನೀರನ್ನು ಹೊರ ಹಾಕಲು ಶಿಕ್ಷಕರು, ವಿದ್ಯಾರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುವಂತಾಗಿದೆ.
ಶಾಲೆಯ 1 ಮತ್ತು 2ನೇ ತರಗತಿಯನ್ನು ಒಂದೇ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ಮಕ್ಕಳು ಇಕ್ಕಟ್ಟಾದ ಕೊಠಡಿಯಲ್ಲಿ ಕುಳಿತುಕೊಂಡು ಪಾಠ ಕೇಳಬೇಕಿದೆ. ಕೆಲವು ವಿದ್ಯಾರ್ಥಿಗಳಿಗೆ ಶಾಲಾ ಆವರಣದ ಹೊರ ಗೋಡೆಗೆ ಕಪ್ಪು ಬಣ್ಣದ ಬೋರ್ಡ್ ಬರೆದು ಮರದ ಕೆಳಗಡೆ ಪಾಠ ಮಾಡಲಾಗುತ್ತಿದೆ. ಶಾಲೆಯ ಮುಂದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಜೋರಾಗಿ ಮಳೆ ಸುರಿದರೆ ಶಾಲೆ ಹಿಂಬದಿಯಲ್ಲಿರುವ ಖಾಲಿ ನಿವೇಶನ ಹಾಗೂ ಚರಂಡಿಯಲ್ಲಿನ ಭಾರಿ ಪ್ರಮಾಣದ ನೀರು ಶಾಲಾ ಆವರಣದೊಳಗಿನ ಕೊಠಡಿಗಳಿಗೆ ನುಗ್ಗುತ್ತದೆ. ಹೊಸ ಕೊಠಡಿ ನಿರ್ಮಿಸಿಕೊಡುವಂತೆ ಶಿಕ್ಷಣ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಭೈರನಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಳೆ, ಗಾಳಿ, ಬಿಸಿಲಿಗೆ ವರ್ಷಪೂರ್ತಿ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಪಾಲಕರು ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ವೈಜ್ಞಾನಿಕ ಚರಂಡಿ ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಿಗೆ ಅವಶ್ಯಕವಿರುವ ಹೆಚ್ಚುವರಿ ಕೊಠಡಿ ನಿರ್ಮಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುವುದು ಶಾಲಾ ಮಕ್ಕಳು ಹಾಗೂ ಪಾಲಕರ ಆಗ್ರಹವಾಗಿದೆ.
ಭೈರನಹಟ್ಟಿ ಸರ್ಕಾರಿ ಶಾಲೆಯ 1 ಕೊಠಡಿ ಸಂಪೂರ್ಣ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಸೋರುತ್ತಿರುವ ಕೊಠಡಿಗಳನ್ನು ತಕ್ಷಣವೇ ದುರಸ್ತಿಪಡಿಸಿಕೊಡುವಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಸಮರ್ಪಕ ಅನುದಾನ ನೀಡಿದರೆ ಶಾಲೆಯ ಎಲ್ಲ ಕೊಠಡಿಗಳನ್ನು ದುರಸ್ತಿಪಡಿಸಲಾಗುತ್ತದೆ.
— ವಿದ್ಯಾಸಾಗರ ಭೋಗಾರ, ಮುಖ್ಯೋಪಾಧ್ಯಾಯ