IRRIGATION ನರಗುಂದ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನರಗುಂದ: ಮತಕ್ಷೇತ್ರದ ವಿವಿಧ ಏತ ನೀರಾವರಿ (IRIGATION) ಯೋಜನೆಗಳಿಗೆ ಕಬ್ಬಿಣದ ಪೈಪ್‌ಲೈನ್ ಜೋಡಿಸುವ 80 ಕೋಟಿ ರೂ. ವೆಚ್ಚದ ಮಹತ್ವದ ಕಾಮಗಾರಿ ಅನುದಾನವಿಲ್ಲದೆ ನನೆಗುದಿಗೆ ಬಿದ್ದಿದೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಕಾಮಗಾರಿ ಪ್ರಾರಂಭಿಸಲು ಶ್ರಮಿಸುತ್ತೇನೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 3 ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಮತದಾರರ ಆಶೀರ್ವಾದದಿಂದ ನಾನು ರಾಜ್ಯಮಟ್ಟದ ನಾಯಕನಾಗಿ ಗುರುತಿಸಿಕೊಂಡಿರುವುದರ ಜತೆಗೆ ಹಲವಾರು ಖಾತೆಗಳ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಈ ವೇಳೆ ನರಗುಂದ ಮತಕ್ಷೇತ್ರದ ಜನರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಮಾಜಿ ಸಚಿವರಿಗೆ ಪರೋಕ್ಷ ಟಾಂಗ್
ಕ್ಷೇತ್ರದ ಕೆಲಸಗಳಿಗಾಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಬಳಿಗೆ ಹೋಗುತ್ತೇನೆ. ಇದನ್ನು ಹೊಂದಾಣಿಕೆ ರಾಜಕಾರಣ ಅನ್ನಲಾಗದು ಎಂದು ಮಾಜಿ ಸಚಿವರ ಹೆಸರೇಳದೆ ಅಪವಿತ್ರ ರಾಜಕೀಯ ಮೈತ್ರಿ ಹೇಳಿಕೆಗೆ ಸಿ.ಸಿ. ಪಾಟೀಲ ತಿರುಗೇಟು ನೀಡಿದರು. ನಾನು ಗದಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಎಚ್.ಕೆ. ಪಾಟೀಲ ಅವರು ಹುಲಕೋಟಿ ಗ್ರಾಮದಲ್ಲಿ ನನ್ನಿಂದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಬಿಜೆಪಿ ಸರ್ಕಾರವಿಲ್ಲದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರೊಂದಿಗೆ ಸೌಹಾರ್ದವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವೆ. ಇದನ್ನು ನೋಡಿ ಕೆಲವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.