ಬೆಳಗಾವಿಯಲ್ಲಿ ನಡೆಯಲಿರುವ 29 ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ (Jamborate) ಕಾರ್ಯಕ್ರಮಕ್ಕೆ ಲಕ್ಷ್ಮೇಶ್ವರ- ಶಿರಹಟ್ಟಿ ತಾಲೂಕುಗಳಿಂದ ತಯಾರಿಸಲಾದ ರೊಟ್ಟಿಗಳನ್ನು ಮಂಗಳವಾರ ಲಕ್ಷ್ಮೇಶ್ವರದಿಂದ ರವಾನಿಸಲಾಯಿತು.
ಲಕ್ಷ್ಮೇಶ್ವರ: ಬೆಳಗಾವಿ ಜಿಲ್ಲೆಯ ಹೊನಗಾದ ಫಿನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ಡಿ. 27ರಿಂದ ಜ. 1ರವರೆಗೆ 5 ದಿನಗಳ ಕಾಲ ನಡೆಯಲಿರುವ 29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ Jamborate ಜಾಂಬೋರೇಟ್ ಕಾರ್ಯಕ್ರಮಕ್ಕೆ ಮಂಗಳವಾರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯ ಆವರಣದಿಂದ ಖಡಕ್ ರೊಟ್ಟಿಗಳನ್ನು ರವಾನಿಸಲಾಯಿತು.
ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಸಿದ್ಧಗೊಂಡ ಅಂದಾಜು 15 ಸಾವಿರಕ್ಕೂ ಅಧಿಕ ರೊಟ್ಟಿಗಳು ಹಾಗೂ ಚಟ್ನಿ ಪುಡಿಯನ್ನು ವಾಹನದ ಮೂಲಕ ರವಾನಿಸುವ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಚಾಲನೆ ನೀಡಿದರು.
‘ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲ ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು ವಿಶೇಷ ಆದ್ಯತೆ ನೀಡಿ 15 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ಸಿದ್ಧಪಡಿಸಿ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಭೋಜನಕ್ಕೆ ಅನುಕೂಲವಾಗಲಿದೆ’ ಎಂದರು.
ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಲಕ್ಷ್ಮೇಶ್ವರ ತಾಲೂಕು ಕಾರ್ಯದರ್ಶಿ ಕೆ.ಆರ್. ಲಮಾಣಿ, ಪ್ರಧಾನ ಗುರುಗಳಾದ ಬಸವರಾಜ ಕುಂಬಾರ, ಎಚ್.ಬಿ. ಸಣ್ಣಮನಿ, ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಡಿ. ಲಮಾಣಿ, ಬಿಆರ್‌ಪಿ ಬಿ.ಎಂ.ಯರಗುಪ್ಪಿ, ಸಿಆರ್‌ಪಿ ಶ್ರೀನಿವಾಸ ಮತ್ತೂರ, ಆರ್.ಎಂ. ಶಿರಹಟ್ಟಿ, ಶಿವಾನಂದ ಚಕ್ರಸಾಲಿ, ಪಿ.ಸಿ. ಕಾಳಶೆಟ್ಟಿ, ಆರ್.ಕೆ. ಉಪನಾಳ ಇತರರಿದ್ದರು.