ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರಗಟ್ಟಿ ಗ್ರಾಮದ ರೈತರ ಕಬ್ಬು ಬೆಳೆಗೆ ಬೆಂಕಿ ಹತ್ತಿರುವದು. 
ಗದಗ

ಬೆಂಕಿ ಅವಘಡಕ್ಕೆ 11 ಎಕರೆ ಬೆಳೆ ಭಸ್ಮ!

ಅಮರಗಟ್ಟಿ ಗ್ರಾಮದಲ್ಲಿ ಮರಗಳು, ಕೃಷಿ ಉಪಕರಣಗಳು ಭಸ್ಮ

ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರಗಟ್ಟಿ ಗ್ರಾಮದ ಹೊಲವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ (FIRE) ಕಾಣಿಸಿಕೊಂಡು ಸುಮಾರು 11 ಎಕರೆಯಲ್ಲಿ ಬೆಳೆದಿದ್ದ ಬೆಳೆ, ಮರಗಳು ಹಾಗೂ ಕೃಷಿ ಉಪಕರಣಗಳು ಸುಟ್ಟು ಭಸ್ಮವಾಗಿವೆ.

ಗ್ರಾಮದ ರೈತ ಮಾಹಂತೇಶ ಪಕೀರಪ್ಪ ವದೇಗೊಳ ಅವರ ಹೊಲದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 3.37 ಎಕರೆ ಕಬ್ಬು, ಎರಡು ತೆಂಗಿನ ಮರ, ಎರಡು ಮಾವಿನ ಮರ, ಎರಡು ನಿಂಬೆ ಮರಗಳು ಹಾಗೂ ಕಾರಂಜಿ ಪೈಪ್ ಮತ್ತು ಸ್ಪ್ರಿಂಕ್ಲರ್‌ಗಳು ಬೆಂಕಿಗೆ ಆಹುತಿಯಾಗಿವೆ.

ಪಕ್ಕದ ರೈತ ಶರಣಪ್ಪ ಒದೇಗೊಳ ಅವರ ಜಮೀನಿಗೂ ಬೆಂಕಿ ವ್ಯಾಪಿಸಿದ್ದು, 3.37 ಎಕರೆ ಕಬ್ಬು, 10 ಬೇವಿನ ಮರಗಳು, ಮೇವಿನ ಬಣವೆ ಹಾಗೂ ಪೈಪ್‌ಲೈನ್ ಸುಟ್ಟುಹೋಗಿವೆ. ಬೆಂಕಿ ಪಾರವ್ವ ಹೆಂಡಿ ಅವರ ಜಮೀನಿಗೆ ವ್ಯಾಪಿಸಿದ್ದು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾಬೆಳೆ ಹೊಗೆಯಾಡಿ ಬೆಳೆ ಬಾಡಿಹೊಗಿದೆ. ಲಕ್ಷ್ಮವ್ವ ಬಸಪ್ಪ ಹೆಂಡಿ ಅವರ 1.5 ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ.

ರೋಣದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಘಟನೆಯಿಂದ ರೈತರು ಭಾರಿ ನಷ್ಟ ಅನುಭವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸುಮಾರು ನಾಲ್ಕು ತಿಂಗಳಿಂದ ಹಗಲು-ರಾತ್ರಿ ಎನ್ನದೆ ಕಬ್ಬಿನ ಬೆಳೆಗೆ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದೆವು. ಸ್ವ ಸಹಾಯ ಸಂಘ, ಬ್ಯಾಂಕ್ ಹಾಗೂ ಪರಿಚಯಸ್ಥರಿಂದ ಸಾಲ ಪಡೆದು ಬೆಳೆ ಬೆಳೆದಿದ್ದೆವು. ಅಗ್ನಿಶಾಮಕ ದಳದವರು ಬೇಗ ಬಂದಿದ್ದರೆ ನಮ್ಮ ಬೆಳೆ ಉಳಿಸಬಹುದಿತ್ತು. ಇದೀಗ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ದಿಕ್ಕು ತೋಚದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟ ಅರಿತು ಸೂಕ್ತ ಪರಿಹಾರ ನೀಡಬೇಕು.
ಶರಣಪ್ಪ ವದೆಗೋಳ, ರೈತ