MAIZE ಬೆಂಬಲ ಬೆಲೆಗೆ ಗೋವಿನಜೋಳ ಖರೀದಿ ಆರಂಭಿಸಲು ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಸೋಮವಾರ ಗೋಪೂಜೆ ನೆರವೇರಿಸಲಾಯಿತು.
- ಲಕ್ಷ್ಮೇಶ್ವರದಲ್ಲಿ ಹೋಮ-ಹವನ, ಗೋಪೂಜೆ
- ಉಪವಾಸ ಆರಂಭಿಸಿದ ಆದರಹಳ್ಳಿ ಶ್ರೀಗಳು
- ಲಕ್ಷ್ಮೇಶ್ವರದಲ್ಲಿ ಮುಂದುವರಿದ ಧರಣಿ
ಲಕ್ಷ್ಮೇಶ್ವರ: ಸರ್ಕಾರಗಳು ರೈತಪರ ನಿಲುವು ತಾಳುವ ಬುದ್ಧಿಯನ್ನು ದೇವರು ಕರುಣಿಸಲಿ ಹಾಗೂ ರೈತರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಹೋಮ ನಡೆಸಲಾಯಿತು.
ಪಟ್ಟಣದಲ್ಲಿ ಗೋವಿನಜೋಳ(MAIZE) ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಿರತ ಸ್ಥಳದಲ್ಲಿ ಗೋಪೂಜೆ ಸಲ್ಲಿಸಿದ ನಂತರ ಶ್ರೀ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕ ಮುರುೇಂದ್ರಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ ಹೋಮ ಕೈಗೊಳ್ಳಲಾಯಿತು.
ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ 3 ದಿನಗಳಿಂದ ಅನೇಕ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಕನ್ನಡಪರ ಸಂಘ, ವ್ಯಾಪಾರಸ್ಥರು ಸಂಘ, ಕೃಷಿ ಪರಿಕರಗಳ ಮಾರಾಟಾಗಾರರು, ಶ್ರೀರಾಮ ಸೇನೆ, ಎಬಿವಿಪಿ, ಆಟೋ ಚಾಲಕರ ಸಂಘ, ದಸರಾ ಉತ್ಸವ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ವೈದ್ಯರ ಸಂಘ, ವಿವಿಧ ಮಠಾಧೀಶರು, ಮಾಜಿ ಶಾಸಕರು ಆಗಮಿಸಿ ಬೆಂಬಲ ಸೂಚಿಸುತ್ತಿದ್ದಾರೆ.
ರೈತರ ನ್ಯಾಯಯುತ ಹೋರಾಟಕ್ಕೆ ನಾಡಿನ ಮಠಾಧೀಶರು ಬೆಂಬಲಕ್ಕೆ ನಿಲ್ಲಲಿದ್ದಾರೆ. ರೈತರ ಹೋರಾಟಕ್ಕೆ ಜಯ ಸಿಗುವವರೆಗೂ ಹನಿ ನೀರೂ ಸಹ ಸೇವಿಸದೆ ಧರಣಿ ಸ್ಥಳದಲ್ಲಿಯೇ ಇರುತ್ತೇನೆ. ಯಾರು ಎಷ್ಟೇ ಹೆದರಿಸಿದರೂ ರೈತರ ಸಲುವಾಗಿ ಪ್ರಾಣ ಬಿಡಲೂ ಸಿದ್ಧ. ಪಕ್ಷಾತೀತವಾಗಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು.-ಡಾ.ಕುಮಾರ ಮಹಾರಾಜರು, ಆದ್ರಳ್ಳಿಯ ಗವಿಮಠದ
ಕಳೆದ ಮೂರು ದಿನಗಳಿಂದ ಆರಂಭವಾಗಿರುವ ರೈತರ ಹೋರಾಟಕ್ಕೆ ಮುಕ್ತಿ ಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಕುಂದಗೋಳದ ಕಲ್ಯಾಣಪುರದ ಶ್ರೀಗಳು, ಆದರಹಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಹಾಗೂ ಜಮಖಂಡಿಯ ಶ್ರೀಗಳು ಆಗಮಿಸಿ ಬೆಂಬಲ ಸೂಚಿಸಿದರು. ಸಂಸದ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ರೈತರೊಂದಿಗೆ ಮಾತನಾಡಿ ಬೇಡಿಕೆಗಳನ್ನು ಸಹಮತ ಇದೆ ಎಂದು ತಿಳಿಸಿದ್ದಾರೆ.