ಜಿಲ್ಲೆ

ಸ್ವಸ್ಥ ಸಮಾಜ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ: ಮಾರುತಿ ಜೋಗದಂಡಕರ

Gadag - Shivanand Hiremath
ಗದಗ: ವಿವಿಧ ವಿಭಾಗಗಳಲ್ಲಿ ನಡೆಯುವ ಅಪರಾಧಗಳ ಬಗ್ಗೆ ಅರಿವು ಪಡೆಯುವದರೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯುವಕರ ಪಾತ್ರ ಅತೀ ಮಹತ್ವವಾದದ್ದು. ಯುವಕರಿಂದ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವೆಂದು ಗದಗಿನ ರಾಜೀವಗಾಂಧಿ ನಗರದ ಬಡಾವಣೆಯ ಪಿ. ಎಸ್. ಐ ಮಾರುತಿ. ಎಸ್. ಜೋಗದಂಡಕರ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ
2024-25 ನೇ ಸಾಲಿನ ನವದಿಶಾ ಹಬ್ಬ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ, ಸನ್ಮಾನ ಸ್ವೀಕರಿಸಿ, ಶ್ರೀ ಗಣೇಶ ಹಾಗೂ ಮಾತಾ ಸರಸ್ವತಿ ವಿಗ್ರಹಗಳಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸುತ್ತಮುತ್ತಲೂ ಅಪರಾಧಗಳು ನಡೆಯುತ್ತಿದ್ದು ಇವುಗಳ ಬಗೆಗೆ ಸವಿಸ್ತಾರವಾದ ಮಾಹಿತಿಯನ್ನು ಪಡೆಯುವುದರೊಂದಿಗೆ ಇವುಗಳ ಬಗ್ಗೆ ಭಾವಿ ಶಿಕ್ಷಕರಾಗುವ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಅತೀ ಮುಖ್ಯವಾದುದು ಎಂದರು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬುದನ್ನು ಅರಿಯಬೇಕು ಎಂದು ತಾವು ಬೇಧಿಸಿದ ಹಲವಾರು ಪ್ರಕರಣಗಳ ರೋಚಕ ಮಾಹಿತಿಯನ್ನು ಪ್ರಶಿಕ್ಷಣಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಮಾರುತಿ ಜೋಗದಂಡಕರ ಅವರ ದಕ್ಷ, ನಿಷ್ಠಾವಂತ, ಕಾರ್ಯವೈಖರಿಯ ಮೂಲಕ ರಾಷ್ಟ್ರಪತಿ ಪದಕವನ್ನು ಪಡೆದ ಬಗ್ಗೆ ಶ್ಲಾಘನಿಯ ಮಾತುಗಳನ್ನು ಆಡಿ, ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಪ್ರಗತಿಯು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಾ ಸಾಗುತ್ತಿದ್ದು ಇದಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಶ್ರದ್ಧೆ ಹಾಗೂ ನಿರಂತರ ಪರಿಶ್ರಮವೇ ಕಾರಣ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಭಾರತಿ ಬಂಡಿ ಪ್ರಾರ್ಥನೆಗೈದರು, ವೈಷ್ಣವಿ ಹಾಗೂ ಸಂಗಡಿಗರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯನ್ನು ಪ್ರಸ್ತುತ ಪಡಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಅವರು ವರ್ಷದುದ್ದಕ್ಕೂ ನಡೆದ ಹಲವಾರು ಘಟನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಪ್ರಶಿಕ್ಷಣಾರ್ಥಿಗಳಾದ ರವಿಚಂದ್ರ ಮತ್ತು ವೀಣಾ ವಿಜಯಪುರ ಅತ್ಯುತ್ತಮ ಪ್ರಶಿಕ್ಷಣಾರ್ಥಿಯ ಗೌರವಕ್ಕೆ ಭಾಜನರಾದರು. ಅದೇ ರೀತಿಯಾಗಿ ಬಸವರಾಜ ಮುದ್ಲಗುಂದಿ ಮತ್ತು ಅಫ್ರೀನ್ ಹೊಸಳ್ಳಿ ಅತ್ಯುತ್ತಮ ಪ್ರಧಾನ ಕಾರ್ಯದರ್ಶಿಯ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರೊ. ಪಿ. ಬಿ. ತಾಳಿ ಸ್ವಾಗತಿಸಿದರು. ಪ್ರೊ. ವಿ. ಪಿ. ಪಾಟೀಲ ವಂದಿಸಿದರು. ಮುಂದೆ ಬರುವ 2025-26 ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪ್ರಶಿಕ್ಷಣಾರ್ಥಿಗೆ ಉಪನ್ಯಾಸಕರಾದ ಕಿಶೋರಬಾಬು. ಜೆ. ನಾಗರಕಟ್ಟಿ ಅವರು ಬಂಗಾರದ ಪದಕವನ್ನು  ಘೋಷಿಸಿದರು. ಕೊನೆಗೆ ಪ್ರಶಿಕ್ಷಣಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಪ್ರೊ. ದತ್ತಪ್ರಸನ್ನ ಪಾಟೀಲ ಅವರು ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅತಿಥಿಮಹನಿಯರು,  ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿಗಳು, ಶ್ರೀ ಎಂ. ಆರ್. ಡೊಳ್ಳಿನ, ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.