ಜಿಲ್ಲೆ

ಮಹಿಳೆ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು: ಡಾ .ಸ್ನೇಹಾ ಶಿರೋಳ.

Gadag - Shivanand Hiremath
ಗದಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿವಿಧೋದ್ದೇಶ ಮಹಿಳಾ ಟ್ರಸ್ಟ್ (ರಿ) ಗದಗ ವತಿಯಿಂದ ಗದುಗಿನ ತೋಟಗಾರಿಕಾ ಇಲಾಖೆಯ ಆವರಣದಲ್ಲಿರುವ ಶಿವ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸ್ತ್ರೀರೋಗ ತಜ್ಞರಾದ ಡಾ ಸ್ನೇಹಾ ಶಿರೋಳರವರು ಮಾತನಾಡುತ್ತಾ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ತೋರುತ್ತಿದ್ದಾಳೆ , ಇದರ ಜೊತೆಗೆ ಇಂದು ಬಹಳಷ್ಟು ರೀತಿಯಲ್ಲಿ ಆರೋಗ್ಯದ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾಳೆ, ಮಹಿಳೆ ಇಂದು ಹಿಂದಿಗಿಂತಲೂ ಹೆಚ್ಚಾಗಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಇಂದಿನ ಆಧುನಿಕ ಜೀವನ ಶೈಲಿ ಆಹಾರ ಪದ್ಧತಿ ಬಹಳಷ್ಟು ಬದಲಾವಣೆ ಆಗಿರುವುದರಿಂದ ಇಂದು ಅದೆಷ್ಟೋ ಆರೋಗ್ಯದ ಸಮಸ್ಯೆಗೆ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ವಯೋ ಸಹಜವಾಗಿ ಆಗುವ ದೈಹಿಕ ಬದಲಾವಣೆಯನ್ನು ಗಮನಿಸುತ್ತಾ ಸೂಕ್ತ ಸಮಯದಲ್ಲಿ ವೈದ್ಯರ ತಪಾಸಣೆಯನ್ನು ಮಾಡಿಸಬೇಕು. ಜೊತೆಗೆ ಇಂದು ಬಹುವಾಗಿ ಕಾಡುತ್ತಿರುವ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ಬಂದಾಗ ಧೃತಿಗೆಡದೆ ಸೂಕ್ತ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಜೀವನದ ಏನೇ ಏರಿಳಿತಗಳಲ್ಲಿ ಸಮ ಚಿತ್ತವನ್ನು ಕಾಯ್ದುಕೊಳ್ಳುವ ಸ್ವಭಾವ ಇಂದಿನ ಮಹಿಳೆ ರೂಡಿಸಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ಶಾರದಾ ಕವಲೂರ ಅವರು ಮಾತನಾಡುತ್ತಾ, ಮಹಿಳೆ ಇಂದು ಸಮಾಜದಲ್ಲಿ ಹಲವು ರೀತಿಯ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾಳೆ. ಕಾನೂನಿನ ಅಡಿಯಲ್ಲಿ ಇಂದು ಮಹಿಳೆಗೆ ಎಲ್ಲ ರೀತಿಯ ಭದ್ರತೆ ರಕ್ಷಣೆ ಇದ್ದಾಗಲೂ ಸಹ ಸಂಪೂರ್ಣ ನ್ಯಾಯ ಸಿಗುತ್ತಿಲ್ಲ.. ಹಾಗಾಗಿ ಮಹಿಳೆ ತನ್ನನ್ನು ತಾನು ಅರಿತುಕೊಳ್ಳುತ್ತಾ ನ್ಯಾಯಯುತವಾದ ನೈತಿಕ ಬದುಕನ್ನು ನಡೆಸುವ ಹೊಣೆಗಾರಿಕೆ ಹೊರಬೇಕು. ಜೊತೆಗೆ  ಸಂವಿಧಾನಾತ್ಮಕ ಕಾನೂನಿನ ತಿಳುವಳಿಕೆ ಹೊಂದಿ ಸಮಾಜದ ಸರ್ವ ರಂಗಗಳಲ್ಲಿ ತನ್ನ ಅಭಿವೃದ್ಧಿಯನ್ನು ಕಾಣಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಮೇಟಿ ಅವರು ಮಾತನಾಡುತ್ತಾ ಮಹಿಳೆ ಎನ್ನುವ ಶಕ್ತಿ ಮನೆಯನ್ನು ಸಮಾಜವನ್ನು ಬೆಳಗುವ ಬೆಳಕಾಗಬೇಕು. ಶಿವಶರಣರ ಆದರ್ಶಗಳು ನಮ್ಮ ಜೀವನಕ್ಕೆ ಬುನಾದಿಯಾಗಬೇಕು . ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬಂತೆ ತಾಯಿ ನೀಡುವ ಮೌಲ್ಯಗಳನ್ನು ಮರೆಯದೆ ಜೀವನದಲ್ಲಿ ಅನ್ವಯಿಸಿಕೊಳ್ಳುವ ಪ್ರವೃತ್ತಿ ಮಹಿಳಾ ಸಂಕುಲದಾಗಬೇಕು. ತಾಯಿಯಾಗಿ ಸಹೋದರಿಯಾಗಿ ಹೆಂಡತಿಯಾಗಿ ಮಗಳಾಗಿ ಜೀವನದ ಹಲವು ಜವಾಬ್ದಾರಿಗಳನ್ನು ನಿಭಾಯಿಸುವ ಹೆಣ್ಣು ಸಮಾಜದ ಕಣ್ಣಾಗಿ ಬದುಕನ್ನು ನಿರ್ವಹಿಸುವ ಕಲೆಯನ್ನು ರೂಡಿಸಿಕೊಳ್ಳಬೇಕು ಎಂದರು.
   ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವರಾಜ ಶರಣರು ಮಾತನಾಡುತ್ತಾ ಅನಾದಿಕಾಲದಿಂದಲೂ ಮಹಿಳೆಯನ್ನು ಗೌರವಿಸುವ ಸಂಸ್ಕೃತಿ ನಮ್ಮದು ಹಾಗಾಗಿ ಇಂದಿನ ಸಾಮಾಜಿಕ ಹಿನ್ನೆಲೆಯಲ್ಲಿ ಮಹಿಳೆಗೆ ಎಲ್ಲಿಯೂ ಸಹ ತೊಂದರೆಯಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದರು.
    ಇದೇ ಸಂದರ್ಭದಲ್ಲಿ ರಡ್ಡಿ ಸಮಾಜದ ಹಿರಿಯರಾದ ಲೀಲಾ.ಮುದರಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿಗಳಾದ ಭಾಗ್ಯಶ್ರೀ ಶಿರೋಳವರು ಉಪಸ್ಥಿತರಿದ್ದರು. ರಾಜೇಶ್ವರಿ ಶಿರೋಳ್ ಅವರು ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಧಾ ಹುಚ್ಚಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಶ್ರೀಮತಿ ಮಧು ಪಾಟೀಲ್ ಹಾಗೂ ಶೈಲಜಾ ಕವಲೂರ ಅವರು ಬಹುಮಾನ ವಿತರಿಸಿದರು. ಶ್ರೀಮತಿ ಕವಿತಾ ಕೊಣ್ಣೂರ ಹಾಗೂ ಶೀಲಾ ಮುದರಡ್ಡಿ ಪ್ರಾರ್ಥನಾ ಗೀತೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮ್ಮ ರಡ್ಡೆರ, ಪವಿತ್ರಾ ರಡ್ಡಿ, ಶೋಭಾ ಪಾಟೀಲ್, ಓದುಗೌಡರ, ಹಾಗೂ ಸಮಸ್ತ ರಡ್ಡಿ ಬಳಗದ ಮಹಿಳೆಯರು  ಉಪಸ್ಥಿತರಿದ್ದರು.