ಗದಗ: ಜಿಲ್ಲೆಯ ಎಲ್ಲ ಪ್ರಮುಖ ನಗರ, ಪಟ್ಟಣ ಪ್ರದೇಶಗಳಲ್ಲಿ ವಿಜಯದಶಮಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಜಿಲ್ಲೆಯ ಜನತೆ ನಿರತರಾದ ದೃಶ್ಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿದೆ.
ಆಯುಧ ಪೂಜೆ ಕೈಗಾರಿಕೆ, ಅಂಗಡಿ, ಮುಗ್ಗಟ್ಟು, ಮಳಿಗೆಗಳಲ್ಲಿ ಪೂಜೆ ನಡೆಯಲಿದೆ. ಹೀಗಾಗಿ ಅವಳಿ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಕಬ್ಬು, ಬಾಳೆ ದಿಂಡು, ಕುಂಬಳಕಾಯಿ, ಚೆಂಡು ಹೂವು, ಮಾವಿನ ತೋರಣ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ದಸರಾ ಹಬ್ಬದ ಅಂಗವಾಗಿ ಜಿಲ್ಲೆಯ ಜನರು ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾತ್ರ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಹಬ್ಬದ ಅಂಗವಾಗಿ ನಗರದ ಟಾಂಗಾಕೂಟ, ಗ್ರೀನ್ ಮಾರುಕಟ್ಟೆ, ಜೆಟಿ ಮಠದ ರಸ್ತೆ, ಬೆಟಗೇರಿ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟು ಅಲ್ಲದೇ, ತಳ್ಳುಗಾಡಿಗಳಲ್ಲೂ ವ್ಯಾಪಾರ ಭರಾಟೆಯಿಂದ ಕೂಡಿತ್ತು. ಉಭಯ ಮಾರುಕಟ್ಟೆಗಳಲ್ಲಿ ಹಬ್ಬದ ನಿಮಿತ್ತ ಬಾಳೆದಿಂಡು, ಮಾವಿನಸೊಪ್ಪು, ವಿವಿಧ ಹಣ್ಣು ಹಾಗೂ ಹೂವಿನ ಖರೀದಿಗೆ ಜನರು ಮುಗಿಬಿದ್ದಿದ್ದರು.
ಪೂಜೆಕ್ಕೆ ಬೇಕಾದ ವಸ್ತುಗಳ ಖರೀದಿ:
ಹೂ, ಹಣ್ಣುಗಳು, ಕಬ್ಬು, ಬಾಳೆ ದಿಂಡು, ಮಹಿಳೆಯರಿಗೆ ಉಡಿ ತುಂಬುವ ಸಾಮಗ್ರಿ, ಮಣ್ಣಿನ ಮಡಿಕೆ, ತಟ್ಟೆ, ದೀಪಗಳು ಇವುಗಳೊಂದಿಗೆ ದಿನಸಿ ವಸ್ತುಗಳು, ಬಟ್ಟೆ, ಆಭರಣಗಳ ಖರೀದಿಯಲ್ಲೂ ಜನ ತೊಡಗಿದ್ದು ಕಂಡು ಬಂತು. ನವದುರ್ಗೆಗೆಯರಿಗೆ ಮಾಲೆ ಅಲಂಕಾರ ಮಾಡಲು ಹೂ ಖರೀದಿಗೂ ಮಹಿಳೆಯರು ಮುಗಿಬಿದ್ದರು. ಮಾವಿನ ಎಲೆ, ವೀಳ್ಯದೆಲೆ, ತೆಂಗಿನಕಾಯಿ, ಕರ್ಪೂರ, ಊದುಬತ್ತಿ, ಲಿಂಬೆಹಣ್ಣು, ಒಣದಾಕ್ಷಿ, ಅರಿಸಿನ ಬೇರು, ಕುಂಕುಮ, ಅರಿಸಿನ ಸೇರಿದಂತೆ ಉಡಿ ತುಂಬಲು ಬೇಕಾದ ವಸ್ತುಗಳನ್ನು ಮಹಿಳೆಯರು ಖರೀದಿ ಮಾಡಿದರು.
ಬೂದು ಗುಂಬಳಗೆ ಬೇಡಿಕೆ:
ಆಯುಧ ಪೂಜೆ ದಿನದಂದು ವಾಹನಗಳು, ಯಂತ್ರಗಳು ಮತ್ತು ಕಚೇರಿಗಳು, ಮಾರಾಟ ಮಳಿಗೆಗಳಿಗೆ ಪೂಜೆ ಸಲ್ಲಿಸಲು ವಿಶೇಷÀವಾಗಿ ಬೂದುಗುಂಬಳ ಮತ್ತು ನಿಂಬೆಹಣ್ಣನ್ನು ಬಳಸಲಾಗುವುದು. ಹೀಗಾಗಿ, ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಬೂದುಗುಂಬಳ ಮತ್ತು ನಿಂಬೆಹಣ್ಣು ವ್ಯಾಪಾರ ಜೋರಾಗಿದೆ. ಬೂದುಗುಂಬಳ ಕಾಯಿಗೆ ೫೦ ರಿಂದ ೨೦೦ ರೂ.ವರಿಗೆ ಬೆಲೆ ಇದೆ. ನವರಾತ್ರಿ ಹಿನ್ನೆಲೆಯಲ್ಲಿ ಚಿಲ್ಲರೆ ಮಾರಾಟದಲ್ಲಿ ಗಾತ್ರಕ್ಕೆ ಅನುಗುಣವಾಗಿ ಎರಡು ನಿಂಬೆಹಣ್ಣಿಗೆ ೧೦ ರೂ.ನಂತೆ ಮಾರುತ್ತಿದ್ದಾರೆ. ತೀರಾ ಚೌಕಾಸಿ ಮಾಡಿದರೆ ಚಿಕ್ಕ ಗಾತ್ರದ್ದು ೧೦ ರೂ.ಗೆ ನಾಲ್ಕು ಹಣ್ಣು ಕೊಡುತ್ತಿದ್ದಾರೆ.
ಬಾಕ್ಸ್
ಮಾರುಕಟ್ಟೆ ದರ (ಹೂವು ಕೆ.ಜಿ.ಗಳಲ್ಲಿ)
ಮಲ್ಲಿಗೆ ಹೂವು ೧೨೦೦ ರೂ.
ಕನಕಾಂಬರ ೧೫೦೦-೩೦೦೦ ರೂ.
ಸೇವಂತಿಗೆ ೧೦೦-೧೫೦ ರೂ.
ಕಾಕಡ ೬೦೦ ರೂ.
ಚೆಂಡು ಹೂವು ೫೦-೧೦೦ ರೂ.
ಸುಗಂಧರಾಜ ೪೦೦ ರೂ.
ಗುಲಾಬಿ ೧ಕ್ಕೆ ೧೦ ರೂಪಾಯಿ
ಹಣ್ಣುಗಳ ದರ
ನಿಂಬೆ ಹಣ್ಣು (೧ಕ್ಕೆ) ೫ ರೂ.
ಸೇಬು ಕೆ.ಜಿ.ಗೆ ೧೦೦-೨೫೦ ರೂ.
ಮೂಸಂಬಿ ೬೦-೧೦೦ ರೂ.
ಚಿಕ್ಕೂ ೫೦-೧೦೦
ಬಾಳೆಹಣ್ಣು-೩೦-೫೦
ಕೋಟ್
ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಹೂವುಗಳ ಬೆಲೆ ಕಡಿಮೆಯಾಗಿದೆ. ಹೀಗಾಗಿ ಗ್ರಾಹಕರು ಹೂವು ಖರೀದಿ ಮಾಡಲು ಮುಂದಾಗಿದ್ದಾರೆ. ಕಳೆದ ವರ್ಷ ನೋಡಿದರೆ ಈ ವರ್ಷ ಹೂವಿನ ಬೆಲೆಯಲ್ಲಿ ಬಾಹಳ ಕಡಿಮೆಯಾಗಿದೆ. ಈ ವರ್ಷ ವ್ಯಾಪರ ತುಂಬಾ ಕಡಿಮೆ ಇದೆ.
-ಫಾರುಖ್ ಹುಬ್ಬಳ್ಳಿ, ಹೂವಿನ ವ್ಯಾಪಾರಿ
ಕಳೆದ ಎರಡೂ ವರ್ಷ ನೋಡಿದರೆ ಈ ವರ್ಷ ಬೆಲೆ ಏರಿಕೆಯಾಗಿದೆ. ಅದರಲ್ಲೂ ತರಕಾರಿ ಹಾಗೂ ಅಡುಗೆ ಎಣ್ಣಿ ಸೇರಿದಂತೆ ಎಲ್ಲ ವಸ್ತುಗಳು ಗಗನ ಮುಖಿಯಾಗಿದೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಮಾತ್ರ ಬಾಹಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೂ ಹಬ್ಬದ ಹಿನ್ನಲೆಯಲ್ಲಿ ಖರೀದಿ ಮಾಡಬೇಕು.
-ಅಶ್ವಿನಿ, ಗೃಹಣಿ