ಜಿಲ್ಲೆ

ಪುಣ್ಯಾಶ್ರಮಕ್ಕೂ-ಕಾಶಿ ಮಠಕ್ಕೂ ಅವಿನಾಭಾವ ಸಂಬಂಧ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಗದಗ: ವೀರೇಶ್ವರ ಪುಣ್ಯಾಶ್ರಮಕ್ಕೂ ಹಾಗೂ ಕಾಶಿ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರಿ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕಾಶಿಪೀಠದ ಪೂರ್ವಾಶ್ರಮದ ಅಮರೇಶ್ವರ ಮಠದ ಅಮರೇಶ್ವರ ಶ್ರೀಗಳು ಸಂಗೀತ ಕಲಿಯಲು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದು ಪಂಚಾಕ್ಷರಿ ಗವಾಯಿಗಳವರ ಶಿಷ್ಯರಾಗಿ ಸಂಗೀತ ಜ್ಞಾನ ಪಡೆದಿದ್ದಾರೆ. ಎಲ್ಲ ಗುರುಕುಲದಲ್ಲಿ ಸಾಮಾನ್ಯವಾಗಿ ಗುರುಗಳಿಗೆ ಕಣ್ಣು ಇರುವುದನ್ನು ನೋಡಿದ್ದೆವೆ. ಆದರೆ, ವೀರೇಶ್ವರ ಪುಣ್ಯಾಶ್ರಮದಲ್ಲಿ ಕಣ್ಣಿಲ್ಲದ ಗುರುಗಳು ಅಂಧ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿರುವುದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಈವರೆಗಿನ ಗುರುಗಳು ಪ್ರಪಂಚವನ್ನು ನೋಡಿಲ್ಲ ಆದರೆ, ಅವರು ನೇರವಾಗಿ ಪರಮಾತ್ಮನನ್ನು ನೋಡಿದ್ದಾರೆ ಎಂದರು.
ಸಂಪತ್ತುಗಳಲ್ಲಿ ಜ್ಞಾನ ಸಂಪತ್ತು ಎಲ್ಲಕ್ಕಿಂತ ದೊಡ್ಡದು. ಬೇರೆ ಸಂಪತ್ತು ಹಂಚಿದರೆ ಕರಗುತ್ತದೆ. ಆದರೆ, ಜ್ಞಾನ ಸಂಪತ್ತು ಹಂಚಿದರೆ ದ್ವಿಗುಣವಾಗುತ್ತದೆ. ಅಂಧರ ಬಾಳಿಗೆ ಜ್ಞಾನ ದೀಪವನ್ನು ವೀರೇಶ್ವರ ಪುಣ್ಯಾಶ್ರಮ ನಿರಂತರವಾಗಿ ನೀಡುತ್ತ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೂಡಿ ಜುಕ್ತಿಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದಂಥ ಗುರುಕುಲ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಇದು ಸಂಗೀತ ಲೋಕದ ಪ್ರಯೋಗಾಲಯ. ಇದನ್ನು ಕಟ್ಟಿ ಬೆಳೆಸಲು ಗುರುಗಳೊಂದಿಗೆ ಹೋರಾಟ ಮಾಡಿದ ಸಾಕಷ್ಟು ಹಿರಿಯ ಜೀವಿಗಳು ನಮ್ಮ ಕಣ್ಮುಂದೆ ಇದ್ದಾರೆ. ಸಮಾಜಕ್ಕೆ ಬೇಡವಾದ ಮಕ್ಕಳನ್ನು ಸಾಕಿ ಸಲುಹಿ ಅವರಿಗೆ ಸಂಸ್ಕಾರ, ಶಿಕ್ಷಣ, ಸಂಗೀತ ಜ್ಞಾನ ನೀಡಿ ಅವರ ಬಾಳನ್ನು ಬೆಳಗಿಸಿದವರು ಉಭಯ ಶ್ರೀಗಳು ಎಂದರು.
ಅಡ್ನೂರ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಡಾ. ಮಹಾಂತಯ್ಯಸ್ವಾಮಿ ಆರಾದ್ರಿಮಠ, ಶ್ರೀ ಮಹೇಶ್ವರ ಸ್ವಾಮೀಜಿ, . ಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.
ಶ್ರೀ ಕುಮಾರೇಶ್ವರ ಕೃಪಾಪೋಷಿತ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇಧಘೋಷ ಜರುಗಿತು. ವೀರೇಶ ಕೂಗು, ಚಂದ್ರು ಬಾಳಿಹಳ್ಳಿಮಠ, ಶರಣ ಸೋಮನಾಳದ ಮಹದೇವಯ್ಯ ಶಾಸ್ತ್ರಿಗಳು ನಿರ್ವಹಿಸಿದರು.
ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಡಾ. ಬಿ.ಎಸ್. ಕರೇಗೌಡ್ರ, ಡಾ. ವಿ.ಎಂ. ಮಲಗೌಡ್ರ, ಪಿ.ಸಿ. ಹಿರೇಮಠ, ಎಂ.ಆರ್. ಹಿರೇಮಠ, ಲಿಂಗರಾಜ ಗುಡಿಮನಿ, ಅನೀಲ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ, ವಿ.ಎಸ್. ಮಾಳೆಕೊಪ್ಪಮಠ, ಅಂಬರೀಶ ಹಿರೇಮಠ, ಜಿ.ಬಿ. ನೀಲರೆಡ್ಡಿ, ಎಂ.ಎ. ಕುಕನೂರ ಇದ್ದರು.
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ರಚಿಸಿದ ‘ಶ್ರೀ ಗುರುವಚನ ಪ್ರಭ’ ಗ್ರಂಥ, ಪದ್ಮಭೂಷಣ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಕವಿಕೃತ ‘ಮಹಾದೇವಿ ಪುರಾಣಂ’ ಗ್ರಂಥ ಹಾಗೂ ಶ್ರೀ ಡಾ. ಕಲ್ಲಯ್ಯಜ್ಜನವರು ರಚಿಸಿದ ‘ಶಿವಯೋಗಿ ಸಂತ ಪುಟ್ಟಯ್ಯಜ್ಜ’ ಧ್ವನಿಸುರಳಿಯನ್ನು ಕಾಶಿಪೀಠದ ಜಗದ್ಗುರುಗಳು ಬಿಡುಗಡೆಗೊಳಿಸಿದರು.