ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮೇರಾ ಯುವ ಭಾರತ, ಗದಗ ಇವರ ಸಂಯೋಗದ ಅಡಿಯಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಪೋಲಿಸ್ ಇನ್ಸಪೇಕ್ಟರಾದ ಶ್ರೀ ಪರಮೇಶ್ವರ ಕವಟಗಿ, ಕರ್ನಾಟಕ ಲೋಕಾಯುಕ್ತ, ಗದಗ ರವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವಕರು ದೇಶದ ಪ್ರಗತಿಗೆ ಆಧಾರ ಸ್ತಂಭವಾಗಿದ್ದು, ಅವರಲ್ಲಿ ಕೌಶಲ್ಯಗಳನ್ನು ಬೆಳೆಸುವುದು ಬಹಳ ಮುಖ್ಯ. ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ಅವರಲ್ಲಿ ಕೌಶಲ್ಯಗಳನ್ನು ಬೆಳೆಸುವ ಸಲುವಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಎಲ್ಲ ಯುವಕರು ಪಡೆದುಕೊಳ್ಳಬೇಕು ಹಾಗೂ ಅವುಗಳ ಸದ್ಬಳಕೆಯನ್ನು ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ, ಆದರೆ ಇದರ ಜೊತೆಗೆ ಸೈಬರ್ ಕ್ರೈಮ್ ಅಥವಾ ಸೈಬರ್ ಅಪರಾಧಗಳೂ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಸೈಬರ್ ಕ್ರೈಂ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಮಸ್ಯೆ ಎದುರಾದಾಗ ತಕ್ಷಣವೇ ಪೋಲಿಸ್ ಠಾಣೆಗೆ ದೂರು ಮಾಡಿ, ಸೈಬರ್ ಕ್ರೈಮ್ ಪೋಲಿಸ್ ಇಲಾಖೆಯ ಸಹಾಯ ಪಡೆಯಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ರಾಜಶ್ರೀ ವಡ್ಲಿ ಅವರು ಯುವಕರಲ್ಲಿ ಕೌಶಲ್ಯಗಳ ಅಭಿವೃದ್ಧಿಗಾಗಿ ಶಿಕ್ಷಣ ಕ್ಷೇತ್ರದ ಮಹತ್ವ ಮತ್ತು ಉತ್ತಮ ಕೌಶಲ್ಯಗಳಿಂದ ಯುವಕರು ಉದ್ಯೋಗ ಅಥವಾ ಸ್ವಉದ್ಯೋಗ ಮಾಡಲು ನೆರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಉಪನ್ಯಾಸ ಮಾಲಿಕೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಅವರು ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯವು ಅತೀ ಮುಖ್ಯವಾದ ಅಂಗವಾಗಿದೆ. ಒಳ್ಳೆಯ ಹುದ್ದೆಯನ್ನು ಅಲಂಕರಿಸುವಲ್ಲಿ ಮಾತ್ರವಲ್ಲದೆ ಯಶಸ್ವಿ ಜೀವನ ಸಾಗಿಸುವಲ್ಲಿಯೂ ಕೌಶಲ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ ಎಲ್ಲ ಪ್ರಶಿಕ್ಷಣಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿದ್ಯಾದಾನ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ಅವರು ಮಾತನಾಡಿ ಜೀವನದಲ್ಲಿ ಕೌಶಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ, ಹಾಗಾಗಿ ಶಿಕ್ಷಣವು ಕೌಶಲ್ಯಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಬೇಕು. ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಒಳ್ಳೆಯ ಹುದ್ದೆಯೊಂದಿಗೆ ಸಂತೋಷದ ಜೀವನ ನಡೆಸಲು ಸಹಾಯಕವಾಗುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕಾರದ ಶ್ರೀ ರವಿಕುಮಾರ ಹೊಂಬಾಳಿ ನೆಹರು ಯುವ ಕೇಂದ್ರ ಗದಗ, ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಶಿಕ್ಷಣಾರ್ಥಿಯಾದ ವೈಷ್ಣವಿ ಅಂಬೇಕರ್ ಪ್ರಾರ್ಥನಾ ಗೀತೆಯನ್ನು ಹಾಡಿದರು, ಬಸವರಾಜ ಮತ್ತು ಆಫ್ರೀನ ಹೊಸಳ್ಳಿ ಅವರು ಸ್ವಾಗತಿಸಿದರು, ಕಾವ್ಯ ಮತ್ತು ಅನಿತಾ ರವರು ಅಥಿತಿಗಳ ಪರಿಚಯ ಭಾಷಣ ಮಾಡಿದರು, ಅಭಿಷೇಕ ಮತ್ತು ರೇಖಾ ನಿರೂಪಣೆ ಮಾಡಿದರು ಮತ್ತು ಭಾರತಿ ವಂದಿಸಿದರು.