ಜಿಲ್ಲೆ

ಪ್ರಶಿಕ್ಷಣಾರ್ಥಿಗಳಿಂದ ರಾಖಿ ಹಾಗೂ ಕರಕುಶಲ ವಸ್ತುಪ್ರದರ್ಶನ.

Gadag - Shivanand Hiremath
ಗದಗ: ನಗರ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ  ಪ್ರಶಿಕ್ಷಣಾರ್ಥಿಗಳು ತಯಾರಿಸಿರುವ ರಾಖಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೊಳ ಅವರು ಪ್ರಶಿಕ್ಷಣಾರ್ಥಿಗಳು ತಯಾರಿಸಿರುವ ರಾಖಿ ಮತ್ತು ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಕಲೆಯು ಮನುಷ್ಯನ ಸೃಜನಶೀಲತೆಯ ಅಭಿವ್ಯಕ್ತಿಯ ಒಂದು ಸುಂದರ ಮಾಧ್ಯಮ. ಪ್ರಶಿಕ್ಷಣಾರ್ಥಿಗಳು ತಮ್ಮ ಕಲಾಕೃತಿಗಳ ಮೂಲಕ ತಮ್ಮ ಭಾವನೆಗಳು, ಅಭಿಪ್ರಾಯಗಳು ಮತ್ತು ಆತ್ಮಾವಲೋಕನವನ್ನು ಚಿತ್ರಿಸಿದ್ದಾರೆ. ಈ ಕಲಾಕೃತಿಗಳು ನಮ್ಮ ಸಮಾಜ, ಸಂಸ್ಕೃತಿ ಮತ್ತು ಜೀವನದ ವಿವಿಧ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಈ ರೀತಿಯ ಕಾರ್ಯಕ್ರಮಗಳು ಪ್ರಶಿಕ್ಷಣಾರ್ಥಿಗಳಲ್ಲಿ ಸಾಂಸ್ಕೃತಿಕ ಹಿತಾಸಕ್ತಿಯನ್ನು ಬೆಳೆಸಲು ಮತ್ತು ಅವರ ಸೃಜನಶೀಲತೆಯನ್ನು ಉತ್ತೇಜಿಸಲು ಪೂರಕವಾಗಿವೆ ಎಂದು ಹೇಳಿದರು ಅಲ್ಲದೇ ಪ್ರಶಿಕ್ಷಣಾರ್ಥಿಗಳು ತಯಾರಿಸಿದ ವಸ್ತುಗಳನ್ನು ಖರೀದಿಸಿದರು.
ಶ್ರೀಮತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಅವರು ನಾವು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ನಮ್ಮದೇ ಆದ ಒಬ್ಬ ಕಲಾವಿದನನ್ನು ಹೊಂದಿರುತ್ತೇವೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸೃಜನಶೀಲರಾಗಿರುತ್ತಾರೆ. ಕಲೆಯು ಕೇವಲ ವೃತ್ತಿಪರತೆ ಅಥವಾ ಕೌಶಲ್ಯವಷ್ಟೇ ಅಲ್ಲ, ಅದು ನಮ್ಮ ಆತ್ಮವನ್ನು ಪುನೀತಗೊಳಿಸುವ, ನಮ್ಮ ಆಲೋಚನೆಗಳನ್ನು ವಿಸ್ತರಿಸುವ ಒಂದು ಮಾರ್ಗವಾಗಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡ್ರ, ಶ್ರೀ ಶಶಿಧರ ಹೊಸಳ್ಳಿ, ಶ್ರೀ ಎಸ್. ವಾಯ್. ಕಠಾರಿ ಮತ್ತು ವಿದ್ಯಾಲಯದ ಎಲ್ಲ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಅದಲ್ಲದೇ ವಿದ್ಯಾದಾನ ಸಮಿತಿಯ ಎಲ್ಲಾ ಅಂಗ ಸಂಸ್ಥೆಗಳ ಎಲ್ಲ ವಿದ್ಯಾರ್ಥಿಗಳು ಬಂದು ಶಿಸ್ತಿನಿಂದ  ಕರಕುಶಲ ವಸ್ತು ಪ್ರದರ್ಶನ  ವೀಕ್ಷಿಸಿ ಸಂತಸಪಟ್ಟು ಹಾಗೂ ಕೆಲವು ವಸ್ತುಗಳನ್ನು ಮತ್ತು ರಾಖಿಗಳನ್ನು ಖರೀದಿಸಿದರು.