ಜಿಲ್ಲೆ

ಮೊಬೈಲ್ ಬಳಕೆದಿಂದಾಗುವ ದುಷ್ಪರಿಣಾಮಗಳ ಕುರಿತು ಕಿರು ನಾಟಕ ಪ್ರದರ್ಶನ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲಾ ವಿದ್ಯಾರ್ಥಿಗಳಿಂದ ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಂದ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಎಂಬ ವಿಷಯದ ಕುರಿತು ಕಿರು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ತಂತ್ರಜ್ಞಾನವು ಪ್ರಾಬಲ್ಯ ಹೊಂದಿರುವ ಈ ಯುಗದಲ್ಲಿ ಮೊಬೈಲ್ ಫೋನ್ ಗಳು ಸರ್ವವ್ಯಾಪಿಯಾಗಿವೆ. ಸಂವಹನ, ಮನರಂಜನೆ ಮತ್ತು ಮಾಹಿತಿ ಪ್ರವೇಶಕ್ಕೆ ಅನಿವಾರ್ಯ ಸಾಧನಗಳಾಗಿ ಕಾರ್ಯನಿರ್ವಹಿಸುತ್ತಿವೆ, ಈ ಸಾಧನಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆಯಾದರೂ ಅವುಗಳ ಸಂಭಾವ್ಯ ಋಣಾತ್ಮಕ ಪರಿಣಾಮಗಳನ್ನು ಗುರುತಿಸುವುದು ಅತ್ಯಗತ್ಯ, ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಕಾರ್ಯಕ್ಷಮತೆಯಿಂದ ಹಿಡಿದು ಮಾನಸಿಕ ಮತ್ತು ದೈಹಿಕ ಆರೋಗ್ಯದವರಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿದಿರಬೇಕಾದ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗುವ ಹಲವಾರು ಪರಿಣಾಮಗಳನ್ನು ಇಲ್ಲಿ ಕಾಣಬಹುದಾಗಿದೆ.
 ಉದಾಹರಣೆಗೆ ಶೈಕ್ಷಣಿಕ ವ್ಯಾಕುಲತೆ, ನಿದ್ರೆಯ ಅಡಚಣೆ ಮತ್ತು ನಿದ್ರಾಹೀನತೆ, ವ್ಯಸನದ ಅಪಾಯ, ದುರ್ಬಲ ಸಾಮಾಜಿಕ ಕೌಶಲ್ಯಗಳು, ಕಡಿಮೆಯಾದ ದೈಹಿಕ ಚಟುವಟಿಕೆಗಳು, ಮಾನಸಿಕ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ, ಕಡಿಮೆಯಾದ ಗಮನ ವ್ಯಾಪ್ತಿ ಹಾಗೂ ಕಳಪೆ ಶೈಕ್ಷಣಿಕ ಸಾಧನೆ, ಸೈಬರ್ ಹಾಗೂ ಆನ್ಲೈನ್ ಕಿರುಕುಳ, ಅಪಘಾತಗಳು ಮತ್ತು ಗಾಯಗಳ ಅಪಾಯ, ಶೈಕ್ಷಣಿಕ ಸಮಗ್ರತೆಯ ಮೇಲೆ ಪರಿಣಾಮ, ಕಣ್ಣಿನ ಒತ್ತಡ ಮತ್ತು ದೃಷ್ಟಿ ಸಮಸ್ಯೆಗಳು, ಅರಿವಿನ ಬೆಳವಣಿಗೆಯ ಮೇಲೆ ನಕರಾತ್ಮಕ ಪರಿಣಾಮ, ವಿಕಿರಣಕ್ಕೆ ಒಡ್ಡಿಕೊಳ್ಳುವ ಅಪಾಯ ಹೆಚ್ಚಾಗುವ ಸಂಭವ ಹಾಗೂ ದೈಹಿಕ ದುರ್ಬಲತೆ ಇನ್ನೂ ಅನೇಕ ಪರಿಣಾಮಗಳನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಫೋನ್ ಅತಿಯಾಗಿ ಬಳಸುವುದರಿಂದ ಅಂತಿಮವಾಗಿ ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು, ಮಕ್ಕಳು ತಮ್ಮ ಅಧ್ಯಯನದ ಮೇಲೆ ಪರಿಣಾಮಕಾರಿಯಾಗಿ ಗಮನಹರಿಸಬಹುದೆಂದು ಖಚಿತಪಡಿಸಿಕೊಳ್ಳಲು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮೊಬೈಲ್ ಫೋನ್ ಬಳಕೆಯ ಮೇಲೆ ನಿಗಾ ವಹಿಸಿ ಮೇಲ್ವಿಚಾರಣೆ ಮಾಡಬೇಕು ಮತ್ತು ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕರೆ ನೀಡಿದರು.
ಮಕ್ಕಳಿಂದ ಕಿರು ನಾಟಕ ಪ್ರದರ್ಶನ:  ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ದೃಷ್ಟಿಯ ಮೇಲೆ ಉಂಟಾಗುವ ಪರಿಣಾಮ ವಿಷಯದ ಕುರಿತು ನರ್ಸರಿ ಹಾಗೂ ಎಲ್ ಕೆ ಜಿ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು,  ಹಿಂದಿನ (ಮೊಬೈಲ್ ಇರದ) ಕಾಲದ ಹಾಗೂ ಇಂದಿನ (ಮೊಬೈಲ್ ಯುಗದ) ಕಾಲದ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಬದುಕಿನ ಹೋಲಿಕೆಯ ಕುರಿತು ಯುಕೆಜಿ ವಿದ್ಯಾರ್ಥಿಗಳು ಕಿರು ನಾಟಕ ಪ್ರದೇಶಿಸಿದರು, ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಅತಿ ಹೆಚ್ಚು ಬಳಸುವ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಗೂಗಲ್, ಯೂಟ್ಯೂಬ್, ಶೇರ್ ಚಾಟ್, ಆನ್ಲೈನ್ ಗೇಮ್ ಹಾಗೂ ಅತಿ ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳ ಕುರಿತು ಒಂದನೇ ತರಗತಿ ವಿದ್ಯಾರ್ಥಿಗಳು ಕಿರು ನಾಟಕ  ಪ್ರದರ್ಶಿಸಿದರು ಹಾಗೂ ಕುಟುಂಬದ ಸದಸ್ಯರು ಅನುಸರಿಸುವ ಒಳ್ಳೆಯ ಸಂಸ್ಕೃತಿ ಹಾಗೂ ಮೊಬೈಲ್ ಫೋನ್ ಬಳಕೆಯು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದ ಕುರಿತು ಎರಡನೇ ತರಗತಿ ವಿದ್ಯಾರ್ಥಿಗಳು ಮೂಕಿಚಿತ್ರ ಹಾಗೂ ನೃತ್ಯ ಪ್ರದರ್ಶಿಸಿ, ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಆಡಳಿತ ಮಂಡಳಿಯ ಮನೆತನದವರಾದ ಶ್ರೀಮತಿ ಸಂಪದಾ ಭೀ. ಹುಯಿಲಗೋಳ ರವರು ಅತ್ಯುತ್ತಮವಾಗಿ ಕಿರು ನಾಟಕ, ಮೂಕಿಚಿತ್ರ ಹಾಗೂ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕ/ಶಿಕ್ಷಕಿಯರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ಹಾಗೂ ಶಿಕ್ಷಕರಾದ ಶ್ರೀ ದೇವೇಂದ್ರಪ್ಪ ಅನ್ವೆರಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಕಿಯರಾದ ಶ್ರೀಮತಿ ಕವಿತಾ ಹೊಸಕೇರಿ ರವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮನೆತನದವರಾದ ಶ್ರೀಮತಿ ಸಂಪದಾ ಭೀ. ಹುಯಿಲಗೋಳ, ವಿಡಿಎಸ್ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವಿ. ಹವಾಲ್ದಾರ, ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.