ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಅತಿಥಿ ಮಹನೀಯರು ಆದರ್ಶ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಪೂಜೆ ಸಲ್ಲಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ನಿಮ್ಮ ನೆಚ್ಚಿನ ಗುರುಗಳನ್ನು ಗೌರವಿಸುವ ದಿನವಾಗಿದ್ದು, ಈ ವಿಶೇಷ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕ ವೃಂದಕ್ಕೆ ಗೌರವವನ್ನು ಸಲ್ಲಿಸಿ ಶುಭಾಶಯಗಳನ್ನು ಕೋರಿ ಅವರ ಮುಖದಲ್ಲಿ ನಗು ತರಿಸಬಹುದು. ಸಪ್ಟಂಬರ್ 5 ಶಿಕ್ಷಕರ ದಿನ, ಅಪ್ರತಿಮ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ಉಪರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವಾಗಿದ್ದು, ಅದರ ಗೌರವಾರ್ಥವಾಗಿ ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಪಾತ್ರವು ಬಹುದೊಡ್ಡದು. ಬದುಕನ್ನು ರೂಪಿಸಿದ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಲು ಇದೊಂದು ಒಳ್ಳೆಯ ದಿನವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿ.ದಾ.ಸ ಅನುದಾನಿತ ಶಾಲೆಗಳ ಸಿಇಓ ಶ್ರೀ ಪಿ. ಎಚ್. ಕಡಿವಾಲ ರವರು ಶಿಕ್ಷಕರ ಕುರಿತು ನಾವು ಇವತ್ತು ಏನಾಗಿದ್ದೇವೋ ಅದಕ್ಕೆ ನಿಮ್ಮ ಕೊಡುಗೆ ಮಹತ್ವವಾದದ್ದು, ಅತ್ಯುತ್ತಮ ಶಿಕ್ಷಕರು ಪುಸ್ತಕದಿಂದ ಅಲ್ಲ ಹೃದಯದಿಂದ ಕಲಿಸುತ್ತಾರೆ ಅಂತಹ ಅದ್ಭುತ ಶಿಕ್ಷಕರು ನನ್ನ ಬದುಕಿನಲ್ಲಿ ಬಂದು ನನಗೆ ಮಾರ್ಗದರ್ಶನ ಮಾಡಿದ್ದಾರೆ. ಗೆಳೆಯನಂತೆಯೇ ನಮ್ಮೊಂದಿಗೆ ಬೆರೆತು ಸರಿ ತಪ್ಪುಗಳನ್ನು ತಿದ್ದಿ ಹೇಳಿ ಜೀವನವನ್ನು ರೂಪಿಸಿದ ಗುರುಗಳಿಗೆ ನನ್ನ ಕೋಟಿ ವಂದನೆಗಳು ಎಂದು ಶಿಕ್ಷಕ ಬಳಗಕ್ಕೆ ಶುಭಾಶಯಗಳನ್ನು ತಿಳಿಸಿದರು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಆದರ್ಶ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಸಾಧನೆ ಮತ್ತು ಅವರ ಮೌಲ್ಯಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಉಣಬಡಿಸಿದರು. ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ಶ್ರೀಮತಿ ರೇಣುಕಾ ವೆಂಕಟಾಪುರ, ಶ್ರೀಮತಿ ಆಫಿಜಾ ಬಾಗಲಕೋಟಿ ಹಾಗೂ ಶ್ರೀಮತಿ ಶ್ವೇತಾ ಮೇಲಗಿರಿ ರವರು ಶಿಕ್ಷಕರ ದಿನಾಚರಣೆಯ ಕುರಿತು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಕು. ಅಮೃತಾ ತಡಸದ, ಕು. ಮೆಹರ್ಣಾಜ್ ಕೊಟ್ಟೂರ ಹಾಗೂ ಕು. ನಯನಾ ಬಾಕಳೆ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕು. ತೇಜಸ್ವಿನಿ ಬಾಗಡೆ ಹಾಗೂ ಸಂಗಡಿಗರು ಮತ್ತು ಕು. ತನುಶ್ರೀ ಹಾದಿ ಹಾಗೂ ಸಂಗಡಿಗರು ಶಿಕ್ಷಕರ ಕುರಿತು ಗೀತೆಗಳನ್ನು ಹಾಡಿದರು. ಯುಕೆಜಿ ಹಾಗೂ 5 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಕುರಿತು ನೃತ್ಯಗಳನ್ನು ಮಾಡಿದರು. ಸ್ವತಃ ವಿದ್ಯಾರ್ಥಿಗಳೇ ಎಲ್ಲಾ ಶಿಕ್ಷಕರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಕೈಗೊಂಡು ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಿದರು. ನಂತರ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸಲ್ಲಿಸಲಾಯಿತು.
9 ನೇ ತರಗತಿಯ ವಿದ್ಯಾರ್ಥಿಗಳು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಕು. ಧೀರಜ್ ಪಾಟೀಲ ನಿರೂಪಿಸಿದರು. ಕು. ದಾನೇಶ್ವರಿ ಹೊರಟ್ಟಿ ಸ್ವಾಗತಿಸಿದರು. ಕು. ಸಂಜನಾ ಆರಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಮಹನೀಯರು, ಪ್ರಾಚಾರ್ಯರು, ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.