ಗದಗ: ನಗರದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು.
ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ಅವರು ಮಾತನಾಡಿ ಕನಕದಾಸರು ಶ್ರೇಷ್ಠ ಸಂತ, ಕವಿ, ಸಂಗೀತಗಾರರು, ತತ್ವಜ್ಞಾನಿ, ವಿಮರ್ಶಕರು, ಚಿಂತಕರು, ಕಾಲಜ್ಞಾನಿ ಹಾಗೂ ಪರಮಭಕ್ತರಾದ ಶ್ರೀ ಕನಕದಾಸರು ತಮ್ಮ ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಒಲಿಸಿಕೊಂಡು ದೇವಮಾನವರಾಗಿದ್ದಾರೆ. ಇವರು ಜನರಲ್ಲಿ ಜಾತೀಯತೆ ಅಂಧಕಾರ, ಅನಕ್ಷರತೆ ಹಾಗೂ ಬಡತನ ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಪ್ರಯತ್ನ ಪಟ್ಟ ಮೊದಲ ಸಂತರಾಗಿದ್ದಾರೆ. ಇಂತಹ ಮಹಾ ಸಂತರ ಜೀವನ ಚರಿತ್ರೆಯನ್ನು ಓದುವುದರ ಮೂಲಕ ಇವರ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಕಿಯರಾದ ಶ್ರೀಮತಿ ಆಫೀಜಾ ಬೇಗಂ ಬಾಗಲಕೋಟೆ ಅವರು ಸಂತ ಕನಕದಾಸರ ಜೀವನ ಮತ್ತು ಸಾಧನೆ ಕುರಿತು ಮಕ್ಕಳಿಗೆ ಸರಳ ಸಂಕ್ಷಿಪ್ತವಾಗಿ ತಿಳಿಸುವುದರ ಜೊತೆಗೆ ಸoತ ಕನಕದಾಸರು ರಚಿಸಿದ ಮೋಹನ ತರಂಗಿಣಿ , ರಾಮಧಾನ್ಯ ಚರಿತ್ರೆ ಹಾಗೂ ಅವರ ಪವಾಡಗಳ ಕುರಿತು ಸಮಗ್ರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪೂರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ವಾಣಿ ಡೊಳ್ಳಿನ ಹಾಗೂ ಕು. ಬೀರಪ್ಪ ಇದ್ಲಿ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕು. ತನುಶ್ರೀ ಹಾದಿ ಹಾಗೂ ದಿವ್ಯಶ್ರೀ ಪೂಜಾರ ಸಂತ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಕು. ಇಶ್ರತ್ ನವಲಗುಂದ ಹಾಗೂ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕಿಯರಾದ ಕು. ಅಂಜುಮ್ ತಹಸಿಲ್ದಾರ್ ನಿರೂಪಿಸಿದರು. ಕು. ಗಾಯಿತ್ರಿ ಅಸುಂಡಿ ಸ್ವಾಗತಿಸಿದರು. ಶ್ರೀಮತಿ ಪಾರ್ವತಿ ಕಟ್ಟಿಮನಿ ವoದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.