ಜಿಲ್ಲೆ

ನಾಡಕವಿ ಹುಯಿಲಗೋಳ ನಾರಾಯಣರಾಯರ ಜಯಂತಿ ಆಚರಣೆ

Gadag - Shivanand Hiremath
ಗದಗ:  ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡದ ಮೊದಲ ನಾಡಗೀತೆ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ನಾಡಗೀತೆಯನ್ನು ಬರೆದ ಹಾಗೂ ವಿದ್ಯಾದಾನ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಹುಯಿಲಗೋಳ ನಾರಾಯಣರಾಯರ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಹುಯಿಲಗೋಳ ನಾರಾಯಣರಾಯರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹುಯಿಲಗೋಳ ನಾರಾಯಣರಾಯರು ಮೂಲತ ನಾಟಕಕಾರರು, ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರು ಬರೆದ ಅನೇಕ ಕವನಗಳು ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇವರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ಇವರು ರಚಿಸಿದ ಕೆಲವು ನಾಟಕಗಳೆಂದರೆ ವಜ್ರಮುಕಟ, ಕನಕವಿಲಾಸ, ಪ್ರೇಮಾರ್ಜುನ, ಮೋಹಹರಿ, ಅಜ್ಞಾತವಾಸ, ಪ್ರೇಮ ವಿಜಯ, ವಿದ್ಯಾರಣ್ಯ, ಸಂಗೀತ ಕುಮಾರರಾಮ ಚರಿತ, ಶಿಕ್ಷಣ ಸಂಭ್ರಮ, ಸ್ತ್ರೀ ಧರ್ಮ ರಹಸ್ಯ ಮುಂತಾದವುಗಳನ್ನು ಬರೆದಿದ್ದಾರೆ.
 ಅಷ್ಟೇ ಅಲ್ಲದೆ 1920 ರ ದಶಕದಲ್ಲಿ ಕನ್ನಡ ನಾಡಿನ ಕನ್ನಡಿಗರ ಮನ ಮನೆಗಳಲ್ಲಿ ಮಿಡಿತಕಂಡ ಕನ್ನಡ ನಾಡು ನುಡಿಯ ನಾಡಗೀತೆಯಾದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಬರೆದು, ಕನ್ನಡ ನಾಡು ನುಡಿಗೆ ಗೌರವ ತೋರಿದ್ದಾರೆ, ನಾರಾಯಣರಾಯರು ಮತ್ತು ಅವರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳಿಂದ ಬಂದ ಸಂಪಾದನೆಯನ್ನು ಹಾಗೂ ಬಿಡುವಿನ ಸಮಯದಲ್ಲಿ ಫುಟ್ಬಾಲ್ ಆಟಗಾರರ ತಂಡವನ್ನು ರಚಿಸಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿ ಅದರಿಂದ ಸಂಗ್ರಹವಾದ ಹಣದಿಂದ 1920 ರಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಗದಗ ನಗರದ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆಯಲಿ ಎಂಬ ದೃಷ್ಟಿಕೋನದಿಂದ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವಲ್ಲಿ ಪ್ರಮುಖರಾಗಿದ್ದಾರೆ. ಅವರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಯು ಶತಮಾನೋತ್ಸವವನ್ನು ಪೂರೈಸಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯುವದಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆದ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇವರು ಬರೆದ ನಾಡಗೀತೆಯನ್ನು ನಾಡಿನ ಎಲ್ಲ ಶಾಲಾ- ಕಾಲೇಜು ಗಳಲ್ಲಿ ಪ್ರತಿದಿನ ಪ್ರಾರ್ಥನಾ ವೇಳೆಯಲ್ಲಿ ಹಾಡುವಂತೆ ಹಾಗೆಯೇ ಇವರ ಜಯಂತಿಯನ್ನು ಜಿಲ್ಲಾ ಹಾಗು ರಾಜ್ಯ ಮಟ್ಟದಲ್ಲಿ ಹಾಗೆಯೇ ಶಾಲೆ, ಕಾಲೇಜು ಹಾಗೂ ಸರಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸರಕಾರವು ಆದೇಶ ನೀಡಿ ನಾಡಕವಿ ಹುಯಿಲಗೋಳ ನಾರಾಯಣರಾಯರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಬೇಕೆಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ನಾಡಕವಿ ಹುಯಿಲಗೋಳ ನಾರಾಯಣರಾಯರು 1884 ಅಕ್ಟೋಬರ್ 4 ರಂದು ಗದಗದಲ್ಲಿ ಜನಿಸಿದರು. ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ, ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ್ ಹಾಗು ಧಾರವಾಡದಲ್ಲಿ ಪೂರೈಸಿದರು. 1902 ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ, ಉಚ್ಛ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. 1907 ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.  ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ ಕಾನೂನು ಪದವಿಯನ್ನು ಪಡೆದು 1911 ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು. ನಂತರ ಇವರು  ತಮ್ಮ ಚಿತ್ತವನ್ನು ಸಾಹಿತ್ಯ ಲೋಕಕ್ಕೆ ಹರಿಸಿ, ಸಾಹಿತ್ಯ ಕ್ಷೇತ್ರಕ್ಕೆ ಜ್ಞಾನ ಭಂಡಾರ ತುಂಬಿದರು. ಹುಯಿಲಗೋಳ ನಾರಾಯಣರಾಯರು ಬರೆದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯು ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ 1924 ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಆಗಿನ್ನೂ ಬಾಲಕಿಯಾಗಿದ್ದ, ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ, ಗಾನ ಕೋಗಿಲೆ ಗಂಗೂಬಾಯಿ ಹಾನಗಲ್ ರವರು ಸ್ವಾಗತಗೀತೆಯಾಗಿ ಹಾಡಿದ್ದರು. ಈ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ರವರು ವಹಿಸಿದ್ದರು ಎಂದರು.
ಪ್ರಶಿಕ್ಷಣಾರ್ಥಿ ಬಸವರಾಜ ಹಾಗೂ ಸಂಗಡಿಗರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಬರೆದರು. ಕು. ಸುನಿಲ್ ಮಾದನೂರು ರವರು ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ, ಡಾ. ಬಿ. ಎಸ್. ರಾಠೋಡ್, ಶ್ರೀ ಎಂ. ಆರ್. ಡೊಳ್ಳಿನ, ಮಹಾವಿದ್ಯಾಲಯದ ಸಮಸ್ತ ಉಪನ್ಯಾಸಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.