ಜಿಲ್ಲೆ

ವಿ.ಡಿ.ಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಹಾಗೂ ರಾಷ್ಟ್ರೀಯ ಚಾರ್ಟೆಡ್ ಅಕೌಂಟೆಂಟ್ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ವೈದ್ಯೋ ನಾರಾಯಣೋ ಹರಿಃ ಎಂದರೆ ವೈದ್ಯರು ದೇವರ ಸಮಾನ ಎಂದರ್ಥ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ ನಮಗೆ ಮರುಜೀವ ನೀಡುವ ವೈದ್ಯರು ನಿಜಕ್ಕೂ ದೇವರ ಸಮಾನ. ನಮ್ಮ ಪಾಲಿಗೆ ದೇವರೇ ಆಗಿರುವ ವೈದ್ಯರನ್ನು ಗೌರವಿಸುವ ದಿನವೇ ರಾಷ್ಟ್ರೀಯ ವೈದ್ಯರ ದಿನವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ವೈದ್ಯರ ಪಾತ್ರವೂ ಕೇವಲ ರೋಗಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿಲ್ಲ, ಇಂದಿನ ಕಾಲದಲ್ಲಿ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ,  ಅಂತಹ ಪರಿಸ್ಥಿತಿಯಲ್ಲಿ ವೈದ್ಯರು ನಮ್ಮ ಏಕೈಕ ಬೆಂಬಲ. ವೈದ್ಯರನ್ನು ಗೌರವಿಸುವ ಮತ್ತು ಅವರ ಸೇವೆಯನ್ನು ಶ್ಲಾಘಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಂಸ್ಥೆಯ ನಿರ್ದೇಶಕರಾದ ಹಾಗೂ ಗದಗ ನಗರದ ESI ಆಸ್ಪತ್ರೆಯ ವೈದ್ಯರಾದ ಡಾ. ಪವನ. ಎಸ್. ಹುಯಿಲಗೋಳ ರವರು ನಮ್ಮ ವೈದ್ಯ ವೃತ್ತಿಯು ಅತ್ಯಂತ ಪ್ರಮಾಣಿಕ ಹಾಗೂ ಪವಿತ್ರವಾದದ್ದು, ಅಷ್ಟೇ ಅಲ್ಲದೆ ಸಾವು ನೋವು ನಡುವೆ ಹೋರಾಡುವ ರೋಗಿಗಳನ್ನು ಗುಣಪಡಿಸಿದ ಸಂತೃಪ್ತಿಯು ನಮಗೆ ಸಿಗುವುದಲ್ಲದೆ ಒಂದು ಜೀವವನ್ನು ಉಳಿಸಿದ ಪುಣ್ಯ ನಮ್ಮದಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬ ವೈದ್ಯರು ತಮ್ಮ ವೃತ್ತಿಯನ್ನು ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದೇ ಆದರೆ ಭಾರತವನ್ನು ಭವ್ಯ ಹಾಗೂ ಸದೃಢ ರಾಷ್ಟ್ರವನ್ನಾಗಿ ನಿರ್ಮಿಸುವ ದೃಢಸಂಕಲ್ಪ ನಮ್ಮದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಚೆನ್ನಾಗಿ ಅಭ್ಯಾಸ ಮಾಡಿ ತಂದೆ ತಾಯಿ, ವಿದ್ಯಾರ್ಜನೆಗೈದ ಗುರುಗಳ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸುವ ಪ್ರಯತ್ನ ಮಾಡಬೇಕು. ಸರಕಾರಿ ವೈದ್ಯರಾಗಿ ಹಾಗೂ ಖಾಸಗಿ ವೈದ್ಯರಾಗಿ ಕೂಡ ತಮ್ಮ ಸೇವೆಯನ್ನು ಒದಗಿಸುವ ವೃತ್ತಿ ಎಂದರೆ ವೈದ್ಯ ವೃತ್ತಿಯಾಗಿದೆ ಎಂದರು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ರಾಷ್ಟ್ರೀಯ ವೈದ್ಯರ ದಿನವು ವೈದ್ಯರ ವೃತ್ತಿಪರ ಸಾಧನೆಗಳನ್ನು ಗುರುತಿಸುವುದಷ್ಟೇ ಅಲ್ಲ ಅವರ ವೈಯಕ್ತಿಕ ತ್ಯಾಗಗಳಿಗೆ ಗೌರವ ನೀಡುವ ಸಂಕೇತವೂ ಆಗಿದೆ. ವೈದ್ಯರು ಹಗಲಿರುಳು ಎನ್ನದೆ ಕೆಲಸ ಮಾಡುತ್ತಾರೆ, ವಿಶೇಷವಾಗಿ ಸಾಂಕ್ರಾಮಿಕ ರೋಗಗಳು ಅಥವಾ ಆರೋಗ್ಯ ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕಿಡುತ್ತಾರೆ. ಅವರು ಪ್ರತಿ ದಿನವೂ ಜೀವನ್ಮರಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಒತ್ತಡ, ವಿಸ್ತೃತ ಕೆಲಸದ ಸಮಯ ಮತ್ತು ಮಾನಸಿಕ ಒತ್ತಡವನ್ನು ಸಹಿಸಿಕೊಳ್ಳುವಬೇಕಾಗುತ್ತದೆ ಎಂದರು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯನ್ನು 1949 ಜುಲೈ 1 ರಂದು ಸಂಸದೀಯ ಕಾಯ್ದೆಯ ಮೂಲಕ ಸ್ಥಾಪಿಸಲಾಯಿತು. ಇದರ ನೆನಪಿಗಾಗಿ ರಾಷ್ಟ್ರೀಯ ಚಾರ್ಟೆಡ್ ಅಕೌಂಟೆಂಟ್ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ ದಿನವನ್ನು ಆಚರಿಸುವುದು ದೇಶದ ಆರ್ಥಿಕ ಬೆಳವಣಿಗೆಗೆ, CA ಗಳು ಮತ್ತು ಲೆಕ್ಕಪತ್ರ ವೃತ್ತಿಪರರ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ಒಂದು ಮಾರ್ಗವಾಗಿದೆ. ಲೆಕ್ಕಪರಿಶೋಧನೆ, ತೆರಿಗೆ, ಲೆಕ್ಕಪತ್ರ ನಿರ್ವಹಣೆ, ಹಣಕಾಸು ವಿಶ್ಲೇಷಣೆ, ಅಪಾಯ ನಿರ್ವಹಣೆ ಮತ್ತು ಕಾರ್ಪೊರೇಟ್ ಕಾನೂನಿನಂತಹ ಅಪಾಯ ನಿರ್ವಹಣೆ ಪ್ರಮುಖ ಸೇವೆಗಳನ್ನು ಒದಗಿಸುವ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾದ ಚಾರ್ಟರ್ಡ್ ಅಕೌಂಟೆಂಟ್ ರವರು ಪ್ರದರ್ಶಿಸಿದ ಸಮರ್ಪಣೆ, ಪರಿಣತಿ ಮತ್ತು ನೈತಿಕ ಮಾನದಂಡಗಳಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಅಕೌಂಟೆಂಟ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ ಹಾಗೂ ಪ್ರಶಿಕ್ಷಣಾರ್ಥಿ ಕು. ಮೇಘನಾ ಮುನವಳ್ಳಿ ರವರು ವೈದ್ಯರಿಗೆ ಹಾಗೂ ಚಾರ್ಟೆಡ್ ಅಕೌಂಟೆಂಟ್ಸ್ ರವರಿಗೆ ಶುಭಾಶಯ ಕೋರಿ ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಡಾ. ಪವನ. ಎಸ್. ಹುಯಿಲಗೋಳ ರವರನ್ನು ಹಾಗೂ ಇತ್ತೀಚಿಗೆ CA ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಹಾಗೂ ಆಡಳಿತ ಮಂಡಳಿಯ ಮನೆತನದವರಾದ ಶ್ರೀಮತಿ ಸಂಪದಾ. ಭೀ. ಹುಯಿಲಗೋಳ ರವರನ್ನು ಶಾಲಾ ವತಿಯಿಂದ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಕು. ಮಿಸ್ಬಾ ಪಟೇಲ್ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಕವಿತಾ ಹೊಸಕೇರಿ ರವರು ಸ್ವಾಗತಿಸಿದರು. ಕು. ಧೀರಜ್ ಪಾಟೀಲ್ ವಂದಿಸಿದರು. ಶ್ರೀ ಪಂಪಣ್ಣ ರೊಡ್ಡಣ್ಣವರ, ಶ್ರೀಮತಿ ಕವಿತಾ ಹೊಸಕೇರಿ, ಕು. ಗಾಯಿತ್ರಿ ಅಸುಂಡಿ ಹಾಗೂ ಸುಶ್ಮಿತಾ ಯಕಜನವರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಅತಿಥಿಗಳು ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.