ಹೊಂಬಳದಿಂದ ಕೃಷಿ ತರಬೇತಿ ಕೇಂದ್ರ ಹುಲಕೋಟಿಗೆ ಸ್ಥಳಾಂತರ, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡ ಕಾರಣ: ವಸಂತ ಪಡಗದ ಆರೋಪ
ಗದಗ: ತಾಲೂಕಿನ ಹೊಂಬಳ ಗ್ರಾಮಕ್ಕೆ ಮಂಜೂರಾಗಿದ್ದ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ಸದ್ದಿಲ್ಲದೇ ಹುಲಕೋಟಿ ಗ್ರಾಮದ ಕೆವಿಕೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಭೂಮಿ ವರ್ಗಾವಣೆ ಪ್ರಕ್ರಿಯೆಯೂ ಸದ್ದಿಲ್ಲದೇ ನಡೆದಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಇದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೊಂಬಳ ಭಾಗದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ 50 ಎಕರೆಗೂ ಅಧಿಕ ಜಮೀನು ಇದೆ. ಹೊಂಬಳ ಭಾಗದಲ್ಲಿ ಹೆಸರು, ಶೇಂಗಾ, ಹತ್ತಿ, ಕಡಲೆ, ಕುಸುಬೆ ಹಾಗೂ ಗೋಧಿ ಬೆಳೆಗಳನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸ್ಥಾಪನೆ ಸೂಕ್ತವಾಗಿತ್ತು. ಆದರೆ, ಈ ಭಾಗದಲ್ಲಿ ಕಪ್ಪು ಮಣ್ಣು ಇರುವ ಕಾರಣ ಕಟ್ಟಡ ನಿರ್ಮಿಸಲು ಸೂಕ್ತವಲ್ಲ. ಬದಲಾಗಿ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಅಗ್ರಿಕಲ್ಚರ್ ಸೈನ್ಸ್ ಫೌಂಡೇಶನ್ ಅಧಿನದಲ್ಲಿನ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದ ಆಧಾರದಲ್ಲಿ ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆಯೂ ನಡೆದಿದೆ. ಜಿಲ್ಲೆಗೆ ಮಂಜೂರು ಆಗುವ ಎಲ್ಲ ಪ್ರಮುಖ ಕೇಂದ್ರಗಳನ್ನು ಹುಲಕೋಟಿಗೆ ವರ್ಗಾವಣೆ ಮಾಡಿಕೊಳ್ಳುವ ಕಾನೂನು ಸಚಿವರು ಇತರೆ ಗ್ರಾಮಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಸಂತ ಪಡಗದ ಆರೋಪಿಸಿದ್ದಾರೆ.