ವಕಾರುಸಾಲು ಕದನದಲ್ಲಿ ಗೆದ್ದ ಕಾಂಗ್ರೆಸ್
ವಕಾರುಸಾಲು ಅಭಿವೃದ್ಧಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಕಿತ
ಸರ್ಕಾರದಿಂದ ಗೆಜೆಟ್ ಆದೇಶ
ಶಿವಾನಂದ ಹಿರೇಮಠ ಗದಗ
ಜಿಲ್ಲೆಯಲ್ಲಿ ರಾಜಕೀಯ ಸಮರ, ಶೀತಲ ಸಮರ, ಕಾನೂನು ಸಮರ ಜತೆ ಕಾಂಗ್ರೆಸ್ ಬಿಜೆಪಿ ನಡುವಿನ ಸ್ವಪ್ರತಿಷ್ಠೆಯ ಪ್ರಶ್ನೆ ಆಗಿದ್ದ "ವಕಾರು ಸಾಲು' ಅಭಿವೃದ್ದಿ(ಗದಗ ಬೆಟಗೇರಿ ವ್ಯಾಪಾರ ಅಭಿವೃದ್ಧಿ ಮತ್ತು ವಸ್ತು ಪ್ರದರ್ಶನ) ಪ್ರಾಧಿಕಾರಕ್ಕೆ ಕೊನೆಗೂ ರಾಜ್ಯಪಾಲರ ಅಂಕಿತ ಬಿದ್ದಾಗಿದೆ. ರಾಜ್ಯ ಸರ್ಕಾರ ಸೋಮವಾರ ಅಧಿಕೃತವಾಗಿ ಗೆಜೆಟ್ ಹೊರಡಿಸಿದೆ. ಪ್ರಾಧಿಕಾರ ರಚನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿರುವ ರಾಜ್ಯ ಸರ್ಕಾರ ನಿಧಿರ್ಷ್ಟವಾಗಿ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರನ್ನು ಪ್ರಾಧಿಕಾರ ಸಮಿತಿಗೆ ಒಳಪಡಿಸಿದೆ. ವಕಾರುಸಾಲು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ನಡುವೆ ಕಾವು ಪಡೆದುಕೊಂಡಿದ್ದ ಪ್ರತಿಷ್ಠೆಯ ಸಮರಕ್ಕೆ ಒಂದು ಹಂತದ ರ್ಪೂಣವಿರಾಮ ಬಿದ್ದಂತಾಗಿದ್ದು, ಮತ್ತೊಂದು ರಾಜಕೀಯ ಸಮರಕ್ಕೆ ಆರಂಭ ಎಂದು ಹೇಳಲಾಗುತ್ತಿದೆ.
ಈ ಹಿಂದೆ ವಕಾರು ಸಾಲು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ್ಕ ಅಂಕಿತಕ್ಕೆ ರಾಜ್ಯಪಾಲರ ಬಳಿ ಎರಡೂ ಬಾರಿ ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಿಕೊಟ್ಟಿತ್ತು. ಕೆಲ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ಕೆಲ ಮಾಹಿತಿಗಳನ್ನು ಕೇಳಿ ರಾಜ್ಯಪಾಲರು ಎರಡೂ ಬಾರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮರಳಿಸಿದ್ದರು. ರಾಜ್ಯಪಾಲರ ಸಲಹೆಯಂತೆ ವಿಧೇಯಕ ತಿದ್ದುಪಡಿಗೊಳಿಸಲಾಗಿದೆ. ಈ ಮೊದಲು ಪ್ರಾಧಿಕಾರ ಒಳಪಡುವ ಕ್ಷೇತ್ರದ ವಿಧಾನಸಭಾ ಸದಸ್ಯರು ಪ್ರಾಧಿಕಾರಕ್ಕೆ ಪದನಿಮಿತ್ಯ ಸದಸ್ಯರು ಆಗಿರುತ್ತಾರೆ ಎಂದು ವಿಧೇಯಕದ ಮೂರನೇ ಖಂಡದಲ್ಲಿ ಸೇರಿಸಲಾಗಿತ್ತು. ಕೇವಲ ಸ್ಥಳಿಯ ಶಾಸಕರನ್ನು ಮಾತ್ರ ಸದಸ್ಯರನ್ನಾಗಿ ವಿಧೇಯಕದಲ್ಲಿ ಒಳಪಡಿಸಿದ್ದನ್ನು ಬಿಜೆಪಿ ಮುಖಂಡರು ವಿರೋಧಿಸಿದ್ದರು. ಇದೊಂದು ರಾಜತಾಂತ್ರಿಕ ನಡೆಯಾಗಿತ್ತು. ಹೀಗಾಗಿ ಪ್ರಸ್ತುತ ವಿಧೇಯಕದ ಮೂರನೇ ಖಂಡದಲ್ಲಿ ವಿಧಾನಸಭಾ ಸದಸ್ಯರ ಜತೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ನಗರಸಭೆ ವಿಪಕ್ಷ ನಾಯಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಪದನಿಮಿತ್ಯ ಸದಸ್ಯರನ್ನಾಗಿ ಸೇರಿಸಿ ಗಜೆಟ್ ಹೊರಡಿಸಲಾಗಿದೆ. ಸರ್ಕಾರೇತರ ಮೂವರು ಸದಸ್ಯರನ್ನು ನೇಮಕ ಮಾಡುವ ಕುರಿತು ಗೆಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸಮರಭ್ಯಾಸ:
ಅರ್ಜುನ ಬಬ್ರುವಾಹನರ ನಡುವಿನ ಸಮರದಂತೆ ವಕಾರು ಸಾಲು ಪ್ರಕರಣವು ಕಾಂಗ್ರೆಸ್ ಬಿಜೆಪಿ ನಡುವಿನ ಸಮರಭ್ಯಾಸಕ್ಕೆ ಕಾರಣವಾಗಿತ್ತು. ವಕಾರು ಸಾಲು ಅಭಿವೃದ್ಧಿ ಪ್ರಾಧಿಕಾರ ವಿಷಯವನ್ನು ಸಚಿವ ಸಂಪುಟದ ವರೆಗೂ ಕಾನೂನು ಎಚ್.ಕೆ. ಪಾಟೀಲ ತೆಗೆದುಕೊಂಡು ಹೋಗಿದ್ದರಿಂದ ಈ ವಿಷಯ ರಾಜ್ಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಷಯ ಮುಂದೆ ಕಾನೂನು ಸಮರಕ್ಕೂ ನಾಂದಿ ಹಾಡಿತು. ಬಿಜೆಪಿ ಸದಸ್ಯರು ವಕಾರು ಸಾಲು ಲೀಸ್ ನೀಡುವ ಮೂಲಕ ಅರ್ಜುನನಂತೆ ಗಾಂಡೀವ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಉರುಳಿಸಿದ್ದರು. ಕೊನೆಗೂ ರಾಜಕೀಯ ಸಮರದಲ್ಲಿ ಗೆದ್ದ ಕಾಂಗ್ರೆಸ್ ಬಿಜೆಪಿಯ ಘಾಂಡೀವ ಅಸ್ತ್ರವನ್ನು ಬಬ್ರುವಾಹನನ ಪ್ರಬಲ ಅಸ್ತ್ರದಂತೆ ಉರುಳಿಸಿ ಪ್ರಾಧಿಕಾರ ರಚನೆ ಮಾಡಿಕೊಂಡಿದೆ. ವಕಾರುಸಾಲು ಕದನದಲ್ಲಿ "ಕದನದೋಳ ಕಲಿ ಪಾರ್ಥನಂ ಕೆಣಕಿ ಉಳೀದವರಿಲ್ಲ' ಎಂಬಂತೆ ಸಚಿವ ಎಚ್.ಕೆ. ಪಾಟೀಲ ಕೂಡ ಪ್ರಾಧಿಕಾರ ರಚನೆಗಾಗಿ ಹಠಕ್ಕೆ ಬಿದ್ದದ್ದರು. ಬಿಜೆಪಿ ಕೂಡ ಕೊನೆವರೆಗೂ ಪ್ರಬಲ ವಿರೋಧವನ್ನೇ ನೀಡಿತಾದರೂ ಸಚಿವರ ಸರ್ಪಾಸ್ತ್ರ ಮುಂದೆ ಬಿಜೆಪಿ ಸದಸ್ಯರ ಅಸ್ತ್ರಗಳೆಲ್ಲ ನಿರುಪಯುಕ್ತವಾದವು.
ಹಿನ್ನಲೆ ಏನು?
ನಗರದ ಕೇಂದ್ರ ಸ್ಥಾನದಲ್ಲಿ ಇರುವ 32 ಎಕರೆ ವಕಾರು ಸಾಲು ಜಮೀನು ಲೀಸ ಅವಧಿ ವಿಸ್ತುರಿಸುವ ಸಂಬಂಧ ಬಿಜೆಪಿ ಅವಧಿಯಲ್ಲಿ ಠರಾವು ಮಾಡಲಾಗಿತ್ತು. ಇದು ನಕಲಿ ಠರಾವು ಎಂದು ಕಾಂಗ್ರೆಸ್ ವಿರೋಧಿಸಿತ್ತು. ಈ ಪ್ರಕರಣದಲ್ಲಿ ಮೂವರು ನಗರಸಭೆ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಅಮಾನತ್ತುಗೊಳಿಸಿ ಆದೇಶ ನೀಡಿದ್ದರು. ಸದಸ್ಯತ್ವ ಸ್ಥಾನದಿಂದ ಅನರ್ಹತೆ ನಂತರ ಸದಸ್ಯರು ಕಾನೂನು ಸಮರ ಮುಂದುವರಿಸಿದ್ದು, ಈ ಪ್ರಕರಣ ಕೊರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇದೆ. ಈ ನಡುವೆ ಕಾಂಗ್ರೆಸ್ ನಗರಸಭೆ ಅಧ್ಯಕ್ಷ ಗದ್ದುಗೆಗೆ ಏರಿತು. ಚುನಾವಣೆ ತಡೆಯಾಜ್ಞೆ ಮೀರಿ ಪ್ರಕ್ರಿಯೆ ನಡೆಸಿದ ಹಿನ್ನೆಲೆ ಚುನಾವಣಾ ಅಧಿಕಾರಿ ಮೇಲೆ ಕಾನೂನು ನಿಂದನೆ ಪ್ರಕರಣ ದಾಖಲಾಗಿತ್ತು. ಹಾಗಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೂ ಕೂಡ ಜಿಲ್ಲಾಡಳಿತ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿಲ್ಲ.
ನೂತನ ಗೆಜೆಟ್ ನಲ್ಲಿ ಏನಿದೆ:
* ಪ್ರಾಧಿಕಾರಕ್ಕೆ ಆಯುಕ್ತರಾಗಿ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ನೇಮಕ
* ನಗರದ ಯೋಜನಾ ಇಲಾಖೆಯ ಓರ್ವ ಸಿಬ್ಬಂದಿಯನ್ನು ಯೋಜನಾಧಿಕಾರಿಯಾಗಿ ನೇಮಕ ಗೊಳಿಸುವುದು.
* ಗದಗಲೋಕೋಪಯೋಗಿ ಇಲಾಖೆಯ ಎಇಇ ಹುದ್ದೆಗೆ ಸಮನಾದ ಅಧಿಕಾರಿಯನ್ನು ಅಭಿಯಂತರನಾಗಿ ನೇಮಕ ಗೊಳಿಸುವುದು.
* ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ವಿಭಾಗದ ಕಿರಿಯ ಶ್ರೇಣಿ ಅಧಿಕಾರಿಯನ್ನು ಪ್ರಾಧಿಕಾರಕ್ಕೆ ಲೆಕ್ಕಾಧಿಕಾರಿಯಾಗಿ ನೇಮಕ
ಕೋಟ್:
ಗದಗ ನಗರವು ವಾಣಿಜ್ಯ ನಗರವಾಗಿ ಅಭಿವೃದ್ಧಿಗೊಳ್ಳಲು ಈ ಪ್ರಾಧಿಕಾರ ಪೂರಕವಾಗಲಿದೆ. ಕೇವಲ ವಾಣಿಜೋದ್ಯಮವಲ್ಲದೇ ನೂತನ ಕೌಶಲ್ಯಗಳ ಅನಾವರಣ ಸ್ಥಳವಾಗಲಿದೆ. ವಿಶೇಷ ಯೋಜನೆಗಳ ಅನುಷ್ಠಾನ ಮೂಲಕ ಪ್ರಾಧಿಕಾರ ರಚನೆ ಸಕಾರಾತ್ಮಕ ಗೊಳಿಸಲಾಗುವುದು.
- ಎಚ್.ಕೆ. ಪಾಟೀಲ, ಕಾನೂನು ಸಚಿವ