ವಿಜಯವಾಣಿ ಸುದ್ದಿಜಾಲ ಗದಗ
ಯುವಕರು ದೇಶ ಸುತ್ತಿ ಕೋಶ ಓದಿ ಅದರಿಂದ ಜ್ಞಾನ ಅನುಭವ ಹೊಂದಿ ವ್ಯಕ್ತಿತ್ವವನ್ನು ಪಕ್ವಗೊಳಿಸಿಕೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ನಗರದ ವೀರನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಪ್ರವಾಸೋದ್ಯಮ ಐತಿಹಾಸಿಕ ಗದುಗಿನ ವೀರನಾರಾಯಣ ದೇವಸ್ಥಾನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕೆಲವರ ಪ್ರಕಾರ ಪ್ರವಾಸೋದ್ಯಮದಿಂದ ಆದಾಯ, ಉದ್ಯೋಗ ಸೃಷ್ಟಿ ಆಗುತ್ತದೆ. ಹಲವರ ಪ್ರಕಾರ ಪ್ರವಾಸೋದ್ಯಮ ಅಂದರೆ ಮನರಂಜನೆಯ ಕ್ಷೇತ್ರ ಎಂಬುದಾಗಿದೆ. ದೇಶ ಸುತ್ತಿ ಕೋಶ ಓದಿದಾಗ ಮಾತ್ರ ನಿಜವಾದ ಪರಿರ್ಪೂಣ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದು ಹೇಳಿದರು.
ಪ್ರವಾಸ ಮಾಡುವುದರಿಂದ ನಮಗೆ ಅರಿವಿಲ್ಲದೆ ಜ್ಞಾನ, ಅನುಭವ ಬರುತ್ತದೆ. ಹಾಗಾಗಿ, ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಸೃಷ್ಟಿಸಿರುವ ಶಿಲ್ಪಕಲೆಯೂ ಮುಚ್ಚಿ ಹೋಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನ ಕಾಲದಲ್ಲಿ ಗದಗ ವೀರನಾರಾಯಣ, ಬೇಲೂರಿನ ಚೆನ್ನಕೇಶವ, ನಂದಿ ನಾರಾಯಣ ಹಾಗೇಯೇ ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿಮಿರ್ಸಿದ ಲಕ್ಕುಂಡಿ ಒಂದು ಕಾಲದಲ್ಲಿ ವೈಭವದಿಂದ ಮೆರದಿತ್ತು. ಹಾಗಾಗಿ ಅದು ಅಜರಾಮರವಾಗಿ ಉಳಿಯಬೇಕಿತ್ತು, ಆದರೆ ನಮ್ಮ ಪರಿಸ್ಥಿತಿ, ಮತ್ತು ಮನಸ್ಥಿತಿ ಅನುಗುಣವಾಗಿ ಎಲ್ಲವೂ ಬದಲಾಯಿಸಿದ್ದೇವೆ. ಇಂದು ಎಲ್ಲರೂ ಜಾಗೃತರಾಗಿ ಮೂಲ ದೇವಾಲಯ, ವಾಸ್ತುಶಿಲ್ಪವನ್ನು ಉಳಿಸಿಕೊಂಡು ಅದಕ್ಕೆ ಗೌರವ ನೀಡಿ ಉಳಿದವರಿಗೂ ಗೌರವ ಬರುವಂತೆ ಮಾಡುವುದು ಕರ್ತವ್ಯ ಎಂದು ಅವರು ಹೇಳಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರವಾಸೋದ್ಯಮ ದಿನಾಚರಣೆಯ ಮೂಲಕ ಜಗತ್ತಿನಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಸೂಚಿಸಲಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವಾರು ರಾಜರು, ಮಠಾಧೀಶರು ಸೇರಿದಂತೆ ಸಾಕಷ್ಟು ಮಹನೀಯರ ಕೊಡುಗೆ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ವಿಶೇಷ ಕಾಳಜಿ ವಹಿಸಿ ಅದನ್ನು ಉಳಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಅದರ ಪರಿಚಯ ಮಾಡಬೇಕು ಎಂದು ನುಡಿದರು.
ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತು ಬರೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಆನಂದ ಪೋತ್ನೀಸ, ಬಿ. ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಕೋಟ್ರೇಶ ವಿಭೂತಿ ಇತರರು ಇದ್ದರು.