ಜಿಲ್ಲೆ

ಸಂವಿಧಾನದ ಆಶಯ ಮತ್ತು ಬಸವಣ್ಣರ ನಿಲುವು ಒಂದೇ: ಎಚ್​.ಕೆ. ಪಾಟೀಲ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸಂವಿಧಾನ ಮತ್ತು ಬಸವಣ್ಣನ ನಿಲುವುಗಳ ನಡುವೆ ಎಂದೂ ತಿಕ್ಕಾಟ, ವೈರುದ್ಯತೆ ಉದ್ಭವಿಸುವುದಿಲ್ಲ. ಸಮಾನತೆಯ ಒಂದೇ ಸಂದೇಶ ಸಾರುವ ನಿಲುವುಗಳಾಗಿವೆ ಎಂದು ಸಚಿವ ಎಚ್​. ಕೆ. ಪಾಟೀಲ ಹೇಳಿದರು.

ತೋಂಟದಾರ್ಯ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಅವರನ್ನು ಜಾತಿಯಿಂದ ಗುರುತಿಸಬಾರದು. ಅವರೊಬ್ಬ ಮಹಾನ್​ ಮಾನವತಾವಾದಿ. ಅವರನ್ನು ಜಾತಿ ಓರೆಗೆ ಹಚ್ಚದಿದ್ದರೆ ಅವರು ವಿಶ್ವಕ್ಕೆ ಮಹಾನ್​ ನಾಯಕರಾಗುತ್ತಿದ್ದರು. ಅಂದಿನ ಕಾಲದಲ್ಲೇ ಶೋಷಣೆ ವಿರೋದಿಸಿ, ಶ್ರೇಣಿಕೃತ ವ್ಯವಸ್ಥೆ ಕಿತ್ತೊಗೆಯಬೇಕು ಎಂಬ ಬಸವಣ್ಣನವರ ಆಲೋಚನೆ, ಹೋರಾಟಗಳು ಸಮಾಜ ಸುಧಾರಣೆಯಲ್ಲಿ ಯಶಸ್ವಿ ಆಗಿವೆ. ಬಸವಣ್ಣನವರು ಪರಿಚಯ ಆಗಿದ್ದರೇ ಮೊದಲೇ ಅವರನ್ನು ಅಪ್ಪಿಕೊಳ್ಳುತ್ತಿದ್ದೇವು ಎಂದು ಬಿ ಆರ್​ ಅಂಬೇಡ್ಕರ್​ ಹೇಳಿದ್ದರು. ಬಸವ ಆದರ್ಶ ತತ್ವ ಪ್ರಾಮುಖ್ಯತೆ ಮಹತ್ವಗಳನ್ನು ತಿಳಿಸಿದ್ದಾರೆ ಎಂದರು.

ದೇಶದ ಕೆಲವು ರಾಜ್ಯಗಳಲ್ಲಿ ಜೀವ ತೆಗೆಯುವ, ಶಾಂತಿ ಭಂಗ ಮಾಡುವ ಕಾರ್ಯಗಳು ನಿರಂತರ ನೋಡುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ಶಾಂತಿಯುತ, ನೆಮ್ಮದಿಯ ಜೀವನ ಸಾಗುತ್ತಿದೆ. ಇದಕ್ಕೆಲ್ಲ ಬಸವಣ್ಣನವರ ತತ್ವ ಆಲೋಚನೆಗಳ ಪ್ರಭಾವ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್​. ಕೆ. ಪಾಟೀಲ ಹೇಳಿದರು.

ಉಪನ್ಯಾಸಕ ಜಿ.ಎಸ್​. ಪಾಟೀಲ ಮಾತನಾಡಿ, ಬಸವ ಜಯಂತಿ ದಿನದಂದು ಹಸುಗಳನ್ನು ಪೂಜಿಸುವ ಪರಿಪಾಠ ನಿಲ್ಲಿಸಬೇಕು. ದಾವಣಗೆರೆಯಲ್ಲಿ ಹರ್ಡೇಕರ ಮಂಜಪ್ಪನವರು ಮೊದಲ ಬಾರಿಗೆ ಬಹಿರಂಗ ಸಮಾವೇಶದಲ್ಲಿ ಬಸವ ಜಯಂತಿ ಆಚರಿಸುವ ಪರಿಪಾಠ ಆರಂಭಿಸಿದರು. ವಚನ ಚಳುವಳಿ ಆಶಯವೇ ಸಮಾನತೆ ಮತ್ತು ಜಾತಿ ನಿರ್ಮೂಲನೆ ಉದ್ದೇಶವಾಗಿತ್ತು. ಸಾಮಾಜಿಕ, ಆಥಿರ್ಕ, ಲಿಂಗ ಮತ್ತು ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಹೋರಾಡಿದರು. ಅಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣ ಇದ್ದಿದ್ದರೆ ಬಸವಣ್ಣ ವಿಶ್ವಕ್ಕೆ ನಾಯಕ ಆಗುತ್ತಿದ್ದರು. 12 ನೇ ಶತಮಾನದಲ್ಲಿ ಕಲ್ಯಾಣ ಚಳವಳಿಗೆ ಜನರನ್ನು ಆಕಷಿರ್ಸುವ ಕೆಲಸವನ್ನು ಅಲ್ಮಮ್ಮ ಪ್ರಭು ಮಾಡಿದ್ದಾರೆ. ಶೈವ ಪರಂಪರೆ, ಸಿದ್ಧ ಪರಂಪರೆ, ರೂಢ ಪರಂಪರೆಯು ಅಂದಿನ ಕಾಲದಲ್ಲಿ ಉಚ್ಚಾಯ ಸ್ಥಿತಿಯಲ್ಲಿ ಇತ್ತು. ಅಂತಹ ಕಾಲದಲ್ಲೇ ಎಲ್ಲ ಪರಂಪರೆ ಜನರನ್ನು ಕಲ್ಯಾಣ ಚಳುವಳಿಗೆ ಆಕಷಿರ್ಸಿದ್ದರು ಎಂದರು.

ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಪ್ರಾಸ್ತಾವಿಕ ಮಾತನಾಡಿ, ಮನುಷ್ಯ ಮನುಷ್ಯರ ನಡುವೆ ಸಮಾನತೆಗಾಗಿ ಹೋರಾಡಿದವರು ವಿಶ್ವಗುರು ಬಸವಣ್ಣನವರು. ಅವರ ಹೋರಾಟಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವು. ಕಲ್ಯಾಣದ ಕಂಪು ಕಲ್ಯಾಣದಿಂದ ಅಪರಪಿತವಾಗಿ ವ್ಯಾಸಿಸಿದೆ. ನಾವೇಲ್ಲರೂ ವಿಶ್ವಗುರುವಾದ ಬಸವಣ್ಣನವರ ಅನುಯಾಯಿಗಳಾಗಿ ಸಾಮರಸ್ಯದಿಂದ ಬಾಳಬೇಕು. ಮೊದಲು ಮನುಷ್ಯರಾಗಿ, ಮಾನವೀಯತೆಯಿಂದ ಸೌಹಾರ್ದ ಜೀವನ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವ ಬೇಳಕು ಎಂಬ ಕವನಗಳ ಬಸವಣ್ಣನವರ ಕುರಿತು ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಶಿರೋಳ ತೋಂಟದಾರ್ಯ ಮಠ ಹಾಗೂ ಬೈರನಹಟ್ಟಿಯ ವಿರಕ್ತಮಠ ದೊರೆಸ್ವಾಮಿ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್​. ಎಸ್​. ಪಾಟೀಲ, ಬಿ.ಎಸ್​. ನೇಮಗೌಡ, ಕೃಷ್ಣಾ ಪರಾಪುರ, ಎಸ್​. ಎಸ್​. ಪಟ್ಟಣಶೆಟ್ಟರ, ಬಾಲಚಂದ್ರ ಬರಮಗೌಡ್ರ, ನಾಗೇಶ ಸವಡಿ, ಬಾಹುಬಲಿ ಜೈನರ ಇತರರು ಇದ್ದರು.

ಬಾಕ್ಸ್​:

ಬಸವಣ್ಣನವರು ಬ್ರಾಹ್ಮಣ್ಯತ್ವ ವಿರೋಧಿಸಿದ್ದರು. ಅದಾಗ್ಯೂ ಬಸವಣ್ಣನವರ ಹುಟ್ಟಿನ ಜಾತಿಯನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದು ವಿಷಾಧನೀಯ. ಸಮಾನತೆ ಸಾರುವ ಅವರ ನಿಲುವುಗಳನ್ನು ಅವರ ಜಾತಿಯಿಂದ ಮತ್ತೇ ಮತ್ತೆ ನಿಂಧಿಸುವುದು ಸರಿಯಲ್ಲಿ. ಅವರು ಯಾವುದೇ ಜಾತಿಗೆ ಸೀಮಿತರಲ್ಲ ಎಂದು ಎಚ್​.ಕೆ. ಪಾಟೀಲ ಹೇಳಿದರು.