ಜಿಲ್ಲೆ

ನೇಣು ಹಾಕಿದ ರೀತಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಯುವಕ

ಗದಗ: ಕರೊನಾ ತಡೆಗಟ್ಟಲು ಲಾಕ್​ಡೌನ್​ ಹೇರಿರುವ ಸಮಯದಲ್ಲಿ ಬಹುತೇಕ ಮಂದಿ ಟಿಕ್​ಟಾಕ್​ ಮೊರೆ ಹೋಗಿರುವುದು ಸುಳ್ಳಲ್ಲ. ಮನರಂಜನೆಯ ರಸದೌತಣ ನೀಡುವ ಟಿಕ್​ಟಾಕ್​ ಕೆಲ ಸಮಯದಲ್ಲಿ ಅಷ್ಟೇ ಅಪಾಯಕಾರಿ ಎಂಬುದನ್ನು ನಿರೂಪಿಸಿದೆ. ಟಿಕ್​ಟಾಕ್​ ಗೀಳಿಗೆ ಬಿದ್ದು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಂತಹ ಉದಾಹರಣೆಗಳಿವೆ. ಇದೀಗ ಆ ಸಾಲಿಗೆ ಗದಗಿನಲ್ಲಿ ನಡೆದ ಪ್ರಕರಣವೊಂದು ಸೇರಿಕೊಂಡಿದೆ.

ಪ್ರಕಾಶ್​(26) ಎಂಬ ಯುವಕನೊರ್ವ ನೇಣು ಹಾಕಿದ ಹಾಗೆ ನಟಿಸಿ, ಟಿಕ್​ಟಾಕ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಎದುರಿಗೆ ಇರುವ ಕಿಟಕಿಯ ಮೇಲೆ ತನ್ನ ಮೊಬೈಲ್​ ಇಟ್ಟು ಟಿಕ್​ಟಾಕ್​ ವಿಡಿಯೋ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ವಿಧಿಯಾಟ ಏನಿತ್ತೋ? ದುರಾದೃಷ್ಟದಿಂದ ಅದೇ ಕುಣಿಕೆಯಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.

ಗದಗ ತಾಲೂಕಿನ ನರಸಾಪೂರ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಘಟನೆ ನಡೆದಿದೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಟಿಕ್​ಟಾಕ್​ ಹುಚ್ಚಾಟದಿಂದಾಗಿ ಇದೀಗ ಜೀವವನ್ನು ಕಳೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.