ಜಿಲ್ಲೆ

ವಚನ ಸಾಹಿತ್ಯಕ್ಕೆ ಭಾರತೀಯ ಜ್ಞಾನ ಪರಂಪರೆಯೇ ಮೂಲ: ಸದಾಶಿವಾನಂದ ಶ್ರೀಗಳು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಭಾರತದ ಸುದೀರ್ ಜ್ಞಾನ ಪರಂಪರೆಯು ಪ್ರತಿ ಹಂತದಲ್ಲಿಯೂ ವಿಕಸನಗೊಳ್ಳುತ್ತ ಬಂದಿದೆ. ಅಂತಹ ವಿಕಾಸದ ಹಾದಿಯ ಬೆಳಕಿನ ಮೂಲದಲ್ಲಿಯೇ ವಚನಗಳು ರಚಿತ ಗೊಂಡಿವೆ ಎಂದು ಸದಾಶಿವಾನಂದ ಶ್ರೀಗಳು ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತೀಯ ಜ್ಞಾನ ಪರಂಪರೆಗೆ ವಚನ ಸಾಹಿತ್ಯದ ಕೊಡುಗೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರು ತಮ್ಮ ಅನುಭವಗಳನ್ನು ಜನರಿಗಾಗಿ ರಚಿಸಿರುವ ಸಾಹಿತ್ಯವೇ ವಚನ. ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮವೇ ವಚನ. ಇವುಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿರುವುದರಿಂದ ವಚನಗಳು ಕನ್ನಡದ ವೇದ ಎಂದು ಕರೆಯಲ್ಪಡುತ್ತವೆ. ವಚನಗಳು ಸುಲಿದಿರುವ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುತ್ತವೆ. ಶರಣ ಸಂಸತಿ ಜಗತ್ತಿನಲ್ಲಿ ಕಂಡರಿಯದ ಅದ್ಭುತ ಸಂಸತಿ. ಸಮಾಜದ ಅವಗುಣಗಳನ್ನು ತೆಗೆದು ಸಮಾಜವನ್ನು ಉದ್ಧರಿಸುವ ಶಕ್ತಿ ವಚನಗಳಿಗಿವೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಗೋವಿಂದಪ್ಪ ಗೌಡಪ್ಪಗೋಳ, ಜಗತ್ತಿನ ಜ್ಞಾನ ಭಂಡಾರಕ್ಕೆ ಕನ್ನಡಿಗರು ಕೊಟ್ಟ ಕಾಣಿಕೆಯೇ ವಚನ ಸಾಹಿತ್ಯ. 12ನೇ ಶತಮಾನದಲ್ಲಿ ಹೊಸ ಸಮಾಜ ನಿಮಿರ್ಸುವ ಉದ್ದೇಶ ಹೊಂದಿದ ವಚನಕಾರರು, ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆಗಳು, ತಾರತಮ್ಯ ಶ್ರೇಣಿಕೃತ ಸಮಾಜ, ಶೋಷಣೆ ಎಲ್ಲದರ ವಿರುದ್ಧ ಹೋರಾಟ ಮಾಡುವ ಮೂಲಕ ಶರಣರು ತಮ್ಮ ಆದರ್ಶಗಳನ್ನು ವಚನಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ವಚನಸಾಹಿತ್ಯ ಮಾನವಿಯ ಸಾಹಿತ್ಯ. ವಚನಸಾಹಿತ್ಯ ಅನುಭಾವ ಸಾಹಿತ್ಯ. ಅದೊಂದು ಜೀವನ ಸಾಹಿತ್ಯ, ವಚನಗಳು ಕುಳಿತು ಬರೆದ ಕಾವ್ಯಗಳಲ್ಲ. ತಲೆಯಿಂದಾಡಿದ ಮಾತುಗಳಲ್ಲ. ಹೃದಯದ ಕುಲುಮೆಯಲ್ಲಿ ಪಕ್ವಗೊಂಡು ಎದೆಯ ಪರದೆಯ ಮೇಲೆ ಮೂಡಿಬಂದ ಮುಕ್ತಗಳಿವು. ವಚನ ಸಾಹಿತ್ಯ ಬಸವಾದಿ ಶಿವಶರಣರು ಅರಿವಿನಿಂದ ಅರಿತು ಆಚರಿಸಿ ಅನುಭವಿಸಿದ ಅನುಭಾವ ಸಾಹಿತ್ಯ ಎಂದರು.

ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎ. ಕೆ. ಮಠ, ವಚನ ನುಡಿಗಳು ಕನ್ನಡ ಸಾಹಿತ್ಯದ ಒಡವೆಗಳು. ವಚನಸಾಹಿತ್ಯ ಕಲ್ಪವೃದ ಕಾಡು. ಕಾಮಧೇನುವಿನ ಹಿಂಡು, ಸಂಜೀವಿನಿಯ ಬಣವೆ. ಇಂತಹ ಅಮೂಲ್ಯ ಆಸ್ತಿಯ ಒಡೆಯರಾದ ನಾವು ಬಡವರಲ್ಲ. ಬಯಸಿದ್ದನ್ನು ಕೊಡುವ ಅಮೃತ ಲವೀಯುವ ಮರಗಳ ಅರಣ್ಯ ವಚನ ಸಾಹಿತ್ಯ ಎಂದರು.

ಕಾರ್ಯಕ್ರಮದಲ್ಲಿ ಡಾ. ವೀಣಾ, ಪ್ರೊ. ರಾಮಚಂದ್ರ ಪಡೇಸೂರು, ಪ್ರೊ. ಚಂದಾಲಿಂಗಪ್ಪ ಹಳ್ಳಿಕೇರಿ, ಪ್ರೊ ಅಂದಯ್ಯ ಅರವಟಗಿಮಠ ಇತರರು ಇದ್ದರು.