Gadag: ರಾಜ್ಯದಲ್ಲಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2000 ಕಿರಿಯ ತರಬೇತಿ ಅಧಿಕಾರಿಗಳು, ತರಬೇತಿ ಅಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸುವುದು, ಸ್ವಯಂ ನಿವೃತ್ತಿ ಹೊಂದಲು ಅನುಮತಿ ನೀಡುವುದು, ನಿವೃತ್ತಿ ಸಂದರ್ಭದಲ್ಲಿ ನೀಡಬೇಕಾದ ಅಂತಿಮ ರಜೆ ನಗದೀಕರಣ ಮುಂತಾದ ಎಲ್ಲ ಬೇಡಿಕೆಗಳನ್ನು ಒಂದೆರಡು ತಿಂಗಳ ಒಳಗಾಗಿ ಸೂಕ್ತ ಆದೇಶ ಜಾರಿ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ ಅವರು ಒಪ್ಪಿಗೆ ಸೂಚಿಸಿರುವುದಾಗಿ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರ್ ಹಾಗೂ ಐಟಿಐ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಆರ್ ರವಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾಕ್ಟರ್ ಶರಣ್ ಪ್ರಕಾಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದ ಕೊಠಡಿಯಲ್ಲಿ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘದ ಪದಾಧಿಕಾರಿಗಳ ಹಾಗೂ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರ ಜೊತೆ ಸುಧೀರ್ಘವಾಗಿ ಸಭೆ ಜರುಗಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿರುವುದು. ಸಭೆಯಲ್ಲಿ ಸಚಿವರು ಮಾತನಾಡುತ್ತಾ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿಗಳಿಗೆ ಒದಗಿಸಬೇಕಾದ ಎಲ್ಲಾ ಸೇವಾ ಭದ್ರತೆ ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸಲು ಅನುದಾನ ಸಂಹಿತೆಗೆ ಈಗಾಗಲೇ ಪರಿಷ್ಕರಣೆ ಮಾಡಿ ಒಪ್ಪಿಗೆ ನೀಡಿದ್ದು ಒಂದೆರಡು ತಿಂಗಳಿನಲ್ಲಿ ಆದೇಶ ಜಾರಿಗೊಳಿಸುವುದಾಗಿ ಹೇಳಿರುವರು.
ಮುಂದುವರೆದು ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ನಿವೃತ್ತಿ ನಿಧನ ದಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಲು ಪರಿಶೀಲಿಸುವುದಾಗಿ ಭರವಸೆ ನೀಡಿರುವರು.
ಸಚಿವರ ಜೊತೆಗೆ ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಶಶೀಲ ನಮೋಶಿ, ಹನುಮಂತ ನಿರಾಣಿ, ಶಾಸಕರಾದ ಶ್ರೀವತ್ಸ ಮತ್ತು ಪದಾಧಿಕಾರಿಗಳಾದ ಕೆ ಎನ್ ಶಶಿಧರ್ ಹಾಗೂ ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರೆಂದು ಅಧ್ಯಕ್ಷರಾದ ಎಸ್.ಆರ್. ರವಿ ಅವರು ತಿಳಿಸಿದ್ದಾರೆ.