ಗಜೇಂದ್ರಗಡ: ಜಿಲ್ಲೆ ಹಾಗೂ ರೋಣ ಮತಕ್ಷೇತ್ರದ ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ಬಿಜೆಪಿ ವತಿಯಿಂದ ಸೆ.24ರಂದು ಗದಗ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಸ್ಯೆ ಇತ್ಯರ್ಥಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ಸೋನಿಯಾ, ರಾಹುಲ್ ಗಾಂಧಿಯವರನ್ನು ಮೆಚ್ಚಸಲು ಹಿಂದು ಧರ್ಮ ಒಡೆಯುವ ಹನ್ನಾರ ನಡೆಸಿದ್ದಾರೆ ಆರೋಪಿಸಿದರು.
ಕುರುಬರ ಮತ ಪಡೆಯಲು ಮಾತ್ರ ಸ್ವಜಾತಿ ಬೇಕು, ಅವರ ಸಂಸ್ಕೃತಿ ಬೇಡ ಎಂಬುದು ಆ ಜನಾಂಗದವರಿಗೆ ಈಗಾಗಲೇ ಗೊತ್ತಾಗಿದೆ. ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕ್ರಿಶ್ಚಿಯನ್ ಪದ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲ ಹಿಂದುಗಳ ವಿರೋಧವಿದೆ ಎಂದರು.
ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು 2008ರಲ್ಲಿ ತಾವು ಸೋತ ಸಂದರ್ಭದಲ್ಲಿ 18 ಸಾವಿರ ಮತಗಳ್ಳತನವಾಗಿದ್ದವು ಎಂದು ಹೇಳಿಕೆ ನೀಡಿದ್ದಾರೆ. ಆದರೆ 2008ರಲ್ಲಿ ಕೇಂದ್ರದಲ್ಲಿ ಮನಮೋಹನಸಿಂಗ್ ಸರ್ಕಾರವಿತ್ತು. ಇಂತಹ ಹುಚ್ಚು ಹೇಳಿಕೆಗಳನ್ನು ಕಾಂಗ್ರೆಸ್‌ನವರು ಬಿಡಬೇಕು ಎಂದರು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೆಶ ಮಲ್ಲಾಪೂರ, ಶಿವಾನಂದ ಮಠದ, ರಾಜೇಂದ್ರ ಘೋರ್ಪಡೆ, ಹನುಮಂತ ಹಟ್ಟಿಮನಿ, ಮುದಿಯಪ್ಪ ಕರಡಿ, ರಮೇಶ ವಕ್ಕರ ಇತರರು ಇದ್ದರು.