ಗದಗ : ಬಗರಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮತ್ತು ನರಸಾಪುರ ಕೈಗಾರಿಕಾ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ 17ನೇ ದಿನಕ್ಕೆ ಕಾಲಿಟ್ಟಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅರೆಬೆತ್ತಲೆ ಧರಣಿ ನಡೆಸಿ ಗದಗ-ಹುಬ್ಬಳ್ಳಿ ಮುಖ್ಯರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ವಾರಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.
ರಸ್ತೆ ತಡೆ ಪ್ರತಿಭಟನೆಯಿಂದ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಹುಬ್ಬಳ್ಳಿಯಿಂದ ಗದಗ ಬರುವ ಕೆಲ ಬಸ್‌ಗಳು ಜಿಲ್ಲಾಡಳಿತ ಭವನದ ಮುಂಭಾಗದಲ್ಲೇ ಪ್ರಯಾಣಿಕರನ್ನು ಇಳಿಸಿ ಹುಬ್ಬಳ್ಳಿಗೆ ಮರಳಿದವು.
ಮರು ಪರಿಶೀಲನೆಯ ಭರವಸೆ ಇನ್ನೂ ಈಡೇರಿಲ್ಲ: ರವಿಕಾಂತ ಅಂಗಡಿ ಆಕ್ರೋಶ
ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, “ಜಿಲ್ಲೆಯ ಅರಣ್ಯ ಅವಲಂಬಿತ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ತಿರಸ್ಕರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ ಸರ್ಕಾರ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ. ಹೊಸ ಅರ್ಜಿ ಸ್ವೀಕಾರಕ್ಕೆ ಅನುಮತಿ ದೊರೆತಿದ್ದರೂ ಅರಣ್ಯ ಅವಲಂಬಿತ ರೈತರಿಂದ ಅರ್ಜಿಗಳನ್ನು ಸ್ವೀಕರಿಸದೇ ರೈತರಿಗೆ ಅನ್ಯಾಯ ಮಾಡಲಾಗಿದೆ. ತಕ್ಷಣ ಅರ್ಜಿಗಳನ್ನು ಸ್ವೀಕರಿಸಿ ಹಕ್ಕುಪತ್ರ ನೀಡಬೇಕು,” ಎಂದರು.
ಅವರು ಮುಂದುವರಿದು, “ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಿಸಲು ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಅಥವಾ ಪರ್ಯಾಯ ಜಮೀನು ಒದಗಿಸಬೇಕು. ಲಕ್ಷೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದ ಹುಲ್ಲುಗಾವಲು ಸಾಗುವಳಿ ರೈತರಿಗೆ ಕೂಡ ತಕ್ಷಣ ಹಕ್ಕುಪತ್ರ ನೀಡಬೇಕು. ಬೆಳದಡಿ, ನಾಗಾವಿ ತಾಂಡಾ, ಕಳಸಾಪುರ, ಅಡವಿಸೋಮಾಪುರ, ಹುಯಿಲಗೊಳ, ಮುರುಡಿ ತಾಂಡಾ, ನಾಗಾವಿ ಮುಂತಾದ ಗ್ರಾಮಗಳಲ್ಲಿ ಇನಾಮದ ಭೂಮಿಯನ್ನು ನಿಜವಾದ ರೈತರು ಪೀಳಿಗೆಗಳಿಂದ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡು ಬಂದರು, ನಕಲಿ ದಾಖಲೆ ಸೃಷ್ಟಿಸಿ ಆ ಭೂಮಿಯನ್ನು ಕಸಿದುಕೊಳ್ಳಲಾಗಿದೆ,” ಎಂದು ಆರೋಪಿಸಿದರು.
ಅವರು, “ಈ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ನೊಂದ ರೈತರಿಗೆ ನ್ಯಾಯ ಒದಗಿಸಬೇಕು,” ಎಂದು ದೃಢವಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್.ಟಿ. ಪೂಜಾರ, ರಮೇಶ ಮಜ್ಜೂರು, ಶ್ರೀನಿವಾಸ ಶಿರಹಟ್ಟಿ, ಬಸವಣ್ಣೆಪ್ಪ ಚಿಂಚಲಿ, ಚಂಬಣ್ಣ ಚೆನ್ನಪಟ್ಟಣ, ಹನುಮಂತ ಚೆನ್ನಪಟ್ಟಣ, ಖಾದೀರ್ ಸಾಬ್, ಫಿರೋಜ್ ನದಾಫ್, ಮಹಮ್ಮದ ಶಲವಡಿ ಸೇರಿದಂತೆ ಜಿಲ್ಲೆಯ ರೈತರು, ಮಹಿಳೆಯರು ಭಾಗವಹಿಸಿ ಪ್ರತಿಭಟನೆಯನ್ನು ಗಟ್ಟಿಗೊಳಿಸಿದರು