Gadag: ಜಲಪುರುಷ” ಶ್ರೀ ರಾಜೇಂದ್ರ ಸಿಂಗ್ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಅವರು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಬರಮತಿ ಆಶ್ರಮದಲ್ಲಿ ಗಾಂಧಿ ಚಿಂತನ ಮಂಥನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು*
ಭಾರತದ ಖ್ಯಾತ ಜಲ ಸಂರಕ್ಷಣಾ ಚಿಂತಕ, “ಜಲಪುರುಷ” ಎಂದು ಪ್ರಸಿದ್ಧರಾದ ಹಾಗೂ ಮೆಗಸೆಸೆ ಪ್ರಶಸ್ತಿ ಪುರಸ್ಕೃತ ಶ್ರೀ ರಾಜೇಂದ್ರ ಸಿಂಗ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS), ಕುಲಪತಿಗಳಾದ ಡಾ. ಭಗವಾನ್ ಅವರು, ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿಶ್ವವಿದ್ಯಾಲಯದ ಸಬರಮತಿ ಆಶ್ರಮದಲ್ಲಿ ಗಾಂಧಿ ಚಿಂತನ - ಮಂಥನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಸಿಂಗ್ ಅವರು ಮಾತನಾಡಿ, “ಜಲ ಸಂರಕ್ಷಣೆ ಎಂಬುದು ಕೇವಲ ಪರಿಸರದ ಪ್ರಶ್ನೆಯಲ್ಲ, ಅದು ಮಾನವೀಯತೆಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ಯುವಕ-ಯುವತೆಯೂ ‘ಜಲಜಾಗೃತಿ’ ಯ ದೀಪವಾಗಿ ಸಮಾಜದಲ್ಲಿ ಬೆಳಕಾಗಬೇಕು,” ಎಂದು ಹೇಳಿದರು.
ಡಾ. ಭಗವಾನ್ ಅವರು ತಮ್ಮ ಮಾತಿನಲ್ಲಿ, “ಗ್ರಾಮೀಣಾಭಿವೃದ್ಧಿಯ ಮೂಲವೇ ಆರೋಗ್ಯ ಮತ್ತು ನೀರಿನ ಶುದ್ಧತೆ. ಇವುಗಳು ಮಾನವ ಜೀವನದ ಶಾಶ್ವತ ಪ್ರಗತಿಗೆ ಅವಿಭಾಜ್ಯವಾದ ಅಂಶಗಳು,” ಎಂದು ಹೇಳಿದರು.
ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಅವರ ನಿರ್ದೇಶಕರಾದ ಡಾ. ಬಸವರಾಜ್ ಬೊಮ್ಮನಹಳ್ಳಿ ಹಾಗೂ ವೈದ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಬರಮತಿ ಆಶ್ರಮದ ಸಂಚಾಲಕರಾದ ಶ್ರೀ ಪ್ರಕಾಶ್ ಮಾಚೇನಹಳ್ಳಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ಸ್ವಾಗತ ಕೋರಿದರು.
ಅಧ್ಯಾಪಕರಾದ ಪ್ರೊ. ಜಮಾದಾರ್, ಶ್ರೀ ಸುರೇಶ್ ಲಮಾಣಿ, ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಭಾಗವಹಿಸಿದರು.