ಜಿಲ್ಲೆ

ಬಂಜಾರ ಸಮುದಾಯದಿಂದ “ಪೊರಕೆ ಚಳುವಳಿ” ಮೂಲಕ ಒಳಮೀಸಲಾತಿ ವರ್ಗೀಕರಣಕ್ಕೆ ತೀವ್ರ ವಿರೋಧ

Gadag - Shivanand Hiremath
ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ, ನಗರದ ಗಾಂಧಿ ವೃತ್ತದಲ್ಲಿ ಸೋಮವಾರದಿಂದ ಆರಂಭವಾದ ಬೃಹತ್ ಪ್ರತಿಭಟನೆ ಮತ್ತು ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಶುಕ್ರವಾರ 6ನೇ ದಿನದತ್ತ ತಲುಪಿದೆ.
ಈ ಹೋರಾಟದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಶುಕ್ರವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ತಮ್ಮ ವೇಳಾಪಟ್ಟಿಯಂತೆ — ಗದಗ ತಾಲೂಕಿನ ಬೆಳದಡಿ, ಮುಂಡರಗಿ ತಾಲೂಕಿನ ಬಿಡನಾಳ, ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ, ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ, ಹಾಗೂ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ತಾಂಡಾಗಳ ಬಂಜಾರರು ಬೆಳಿಗ್ಗೆ 11.00 ಗಂಟೆಗೆ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ “ಪೊರಕೆ ಚಳುವಳಿ” ನಡೆಸಿ, ಮೆರವಣಿಗೆಯಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವು ಕಡೆಗಳಲ್ಲಿ ರಸ್ತೆ ತಡೆ ನಡೆದಿದ್ದು, ಅದರ ಪರಿಣಾಮ ಸವಾರರು ಪರದಾಡುವಂತಾಯಿತು.
ಪ್ರತಿಭಟನಾಕಾರರು ಕಾಡು ಬೆಟ್ಟಗಳಲ್ಲಿ ದೊರೆಯುವ ಬಂಧರಕಿ ಮತ್ತು ಕಸಬರಗಿ ಸಸಿಗಳನ್ನು ಕೈಯಲ್ಲಿ ಹಿಡಿದು, ರಸ್ತೆಯುದ್ದಕ್ಕೂ ಸ್ವಚ್ಛತೆ ನಡೆಸುತ್ತಾ “ಪೊರಕೆ ಚಳುವಳಿ” ಮುಖಾಂತರ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ರವಿಕಾಂತ್ ಅಂಗಡಿ, ಕೆ.ಸಿ. ನಭಾಪುರ, ಪರಮೇಶ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್. ಪೂಜಾರ್, ಟಿ.ಡಿ. ಪೂಜಾರ್, ವಿಠಲ್ ತೋಟದ, ಮನೋಜ್ ಕಾರ್ಬಾರಿ, ಕುಬೇರಪ್ಪ ಪವಾರ್, ಚಂದಪ್ಪ ಮಾನಪ್ಪ ಕಾರ್ಬಾರಿ, ನಾರಾಯಣ ವರ್ಜನಪ್ಪ ಪೂಜಾರ್, ಥಾವರಪ್ಪ ಪಕೀರಪ್ಪ ಪೂಜಾರ್, ಟಿಕಪ್ಪ ಧನಂಜಪ್ಪ ನಾಯಕ್, ಕೇಶಪ್ಪ ಛತ್ರಪ್ಪ ಕಾರ್ಬಾರಿ, ದೇವಪ್ಪ ರಾಮಪ್ಪ ರಾಠೋಡ್, ಈರಣ್ಣ ಚೌಹಾಣ್, ಕೃಷ್ಣಪ್ಪ ಪೂಜಾರ್, ಲಾಲಪ್ಪ ಪೂಜಾರ್, ಚಂದಪ್ಪ ನಾಯಕ್, ಮಂಜುನಾಥ ಕಾರಭಾರಿ, ಕುಮಾರ್ ಡಾವ್, ಸಂತೋಷ ಲಮಾಣಿ, ಕೃಷ್ಣ ಲಮಾಣಿ, ಶಿವಪ್ಪ ನಾಯಕ್, ಗಿರೀಶ ಕಟ್ಟಿಮಣಿ, ಕುಬೇರ್ ಪವಾರ್, ಭೀಮಸಿಂಗ್ ರಾಠೋಡ್, ಗಿರೀಶ ಕಾರಭಾರಿ, ಸಂತೋಷ ಪವಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕೋಟ್ :
“ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣ ವಿರೋಧಿ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪ್ರತಿ ದಿನ ವಿಭಿನ್ನ ರೀತಿಯ ಹೋರಾಟಗಳನ್ನು ಮಾಡುತ್ತಾ ಸರ್ಕಾರದ ಬಂಜಾರ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.”
-ರವಿಕಾಂತ್ ಅಂಗಡಿ,
ವಕೀಲರು ಹಾಗೂ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ.