ಜಿಲ್ಲೆ

ನಗರದಲ್ಲಿ ಬಗರ್‌ಹುಕುಂ ರೈತರಿಂದ ಭಿಕ್ಷಾಟನೆ

Gadag - Shivanand Hiremath

ಗದಗ: ಜಿಲ್ಲೆಯ ಬಗರ್‌ಹುಕುಂ ರೈತರ ಹೋರಾಟವು 22ನೇ ದಿನಕ್ಕೂ ತಲುಪಿದ್ದು, ಸರ್ಕಾರವು ಅವರ ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಸೋಮವಾರ ರೈತರು ಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದರು. ನಗರದ ಗಾಂಧಿ ಸರ್ಕಲ್‌ನಿಂದ ಆರಂಭವಾಗಿ ಮಾರ್ಕೆಟ್ ರಸ್ತೆ ಹಾದಿ ಹಿಡಿದು, ಜಿಲ್ಲಾಡಳಿತ ಕಚೇರಿಯವರೆಗೆ ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ “ಭಿಕ್ಷಾಟನೆ” ನಡೆಸಿದರು.

ರೈತರು ಡೊಳ್ಳು ಬಾರಿಸುತ್ತಾ, ಕೈಯಲ್ಲಿ ತಟ್ಟೆ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಿಗಳಿಂದ ಹಣ, ಅಕ್ಕಿ, ತರಕಾರಿ ಮುಂತಾದ ವಸ್ತುಗಳನ್ನು ಬೇಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಭಿಕ್ಷೆಯಿಂದ ಸಂಗ್ರಹಿಸಿದ ರೂ. 3,750 ನಗದು ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, “ನಮಗೆ ಹಕ್ಕುಪತ್ರ ನೀಡಿ” ಎಂದು ಜಿಲ್ಲಾಧಿಕಾರಿಗಳಿಗೆ ಕಾದು, ಯಾವ ಅಧಿಕಾರಿಗಳು ಬಾರದ ಕಾರಣ ಮನವಿ ನಿಲ್ಲಿಸಿ ಧರಣಿ ಮುಂದುವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಅವರು, “ಕಳೆದ 21 ದಿನಗಳಿಂದ ಅಹೋರಾತ್ರಿ ಧರಣಿ ಮುಂದುವರಿದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಜಿಲ್ಲಾ ಉಸ್ತುವಾರಿ ಸಚಿವರು 21 ದಿನ ಕಳೆದರೂ ನಮ್ಮ ಕಡೆ ತಲೆ ಹಾಕದಿರುವುದು ಬೇಸರದ ಸಂಗತಿ. ಅವರು ಕೊಟ್ಟ ಮಾತುಗಳನ್ನು ಪಾಲಿಸದೇ ಇರುವುದು ವಚನಭ್ರಷ್ಟತೆಯ ಸಂಕೇತ. ರೈತರು ಧರಣಿಗೆ ಕುತಿರುವುದು ಅವರಿಗೆ ತಿಳಿದಿದೆಯೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಅಥವಾ ಜಿಲ್ಲಾಡಳಿತವೇ ತಪ್ಪು ಮಾಹಿತಿಯನ್ನು ಸಚಿವರಿಗೆ ತಲುಪಿಸುತ್ತಿದೆಯೋ ಎಂಬ ಸಂಶಯ ಉಂಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದುವರಿದು, “ಇನ್ನು ಎರಡು ದಿನಗಳ ಕಾಲ ಶಾಂತಿಯುತ ಹೋರಾಟ ನಡೆಸುತ್ತೇವೆ. ಆ ಬಳಿಕವೂ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ, ಉಗ್ರ ಹೋರಾಟದ ರೂಪರೇಷೆ ತೋರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಪ್ರೊ. ಎನ್.ಟಿ. ಪೂಜಾರ ಮಾತನಾಡಿ, “ರೈತರು 21 ದಿನಗಳಿಂದ ಮನೆ–ಮಠ, ಬಿಸಿಲು–ಮಳೆ, ಚಳಿ–ಗಾಳಿಯನ್ನು ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸದಿರುವುದು ಖೇದಕರ. ಜಿಲ್ಲಾಡಳಿತವು ತಕ್ಷಣ ಸರಿಯಾದ ಮಾಹಿತಿಯನ್ನು ಸಚಿವರಿಗೆ ನೀಡಿ, ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

ಹೋರಾಟದ ಹಿನ್ನೆಲೆ :

ಜಿಲ್ಲೆಯ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ರೈತರು, ಜೊತೆಗೆ ನಾಗಾವಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕಾಗಿ ಭೂಮಿ ಕಳೆದುಕೊಂಡ ರೈತರು ಸರ್ಕಾರದಿಂದ ಹಕ್ಕುಪತ್ರ ಮತ್ತು ಪರಿಹಾರವನ್ನು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆಯನ್ನು ಈಡೇರಿಸುವಂತೆ ಆಗಸ್ಟ್ 19ರಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.

ಹಿಂದೆ 2023ರಲ್ಲಿ ಇದೇ ರೀತಿಯ ಧರಣಿ ನಡೆದಾಗ, ಸಚಿವ ಎಚ್.ಕೆ. ಪಾಟೀಲ ಅವರು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವರು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ, ಮಾನವೀಯತೆಯಿಂದ ಧರಣಿ ಸ್ಥಳಕ್ಕೆ ಭೇಟಿ ನೀಡದೆ ಹೋದದ್ದು ರೈತರ ಆಕ್ರೋಶ ಹೆಚ್ಚಿಸಿದೆ.

ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಬಿ.ಎಸ್.ಚಿಂಚಲಿ, ಪ್ರೊ. ಎನ್.ಟಿ.ಪೂಜಾರ, ನಾಮದೇವ, ಫಿರೋಜ್ ನಧಾಪ್, ಎಮ್. ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಹರ್ತಿ, ಶಿರಹಟ್ಟಿ,  ಅಡವಿಸೋಮಾಪೂರ, ಗಜೇಂದ್ರಗಡ, ದಿಂಡೂರ, ಡೋಣಿ, ಮುರುಡಿ ಮುಂತಾದ ಗ್ರಾಮಗಳ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.