ಜಿಲ್ಲೆ

ಧರ್ಮಸ್ಥಳದಲ್ಲಿ ಸತ್ಯಯಾತ್ರೆಯಲ್ಲಿ ಜಿಲ್ಲೆಯ ನೂರಾರು ಜನರು ಭಾಗಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಾತಿ, ಧರ್ಮ, ಪಕ್ಷ ಎಲ್ಲವನ್ನು ಮೀರಿ ರಾಜ್ಯದ ಸಮಸ್ತ ಜನತೆ ಪೂಜಿಸುವ ಧರ್ಮಸ್ಥಳದ ಶ್ರದ್ದಾ ಕೇಂದ್ರದ ಬಗ್ಗೆ ಕೆಲವು ಕಾಣದ ಕೈಗಳು ಅಪಪ್ರಚಾರ ನಡೆಸುತ್ತಿರುವುದನ್ನು ಜೆಡಿಎಸ್​ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ. ಪವಿತ್ರ ತೀರ್ಥ ಕ್ಷೇತ್ರದಲ್ಲಿ ಅಪಪ್ರಚಾರವನ್ನು ಖಂಡಿಸಿ ಜೆಡಿಎಸ್​ ಪಕ್ಷದಿಂದ ಆ. 31 ರಂದು ಧರ್ಮಸ್ಥಳ ಸತ್ಯ ಯಾತ್ರೆ ನಡೆಯಲಿದ್ದು, ರಾಜ್ಯದ, ಜಿಲ್ಲೆಯ ಸಮಸ್ತ ಜೆಡಿಎಸ್​ ಮುಖಂಡರು, ಕಾರ್ಯಕರ್ತರು ಧರ್ಮಸ್ಥಳದಲ್ಲಿ ನಡೆಯುವ ಸತ್ಯಯಾತ್ರೆ ಕಾರ್ಯಕ್ರಮದಲ್ಲಿ ಭಾಗತವಹಿಸಲಿದ್ದಾರೆ. ಜಿಲ್ಲೆಯಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ. ವೈ. ಮುಧೋಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಕದಲಿ ಗ್ರಾಮದಿಂದ ಬೆಳಗ್ಗೆ 11 ಗಂಟೆಗೆ ಯಾತ್ರೆ ಆರಂಭವಾಗಲಿದೆ. 12.30ಕ್ಕೆ ಧರ್ಮಸ್ಥಳ ತಲುಪಿ ಶ್ರೀಮಠದ ವರೆಗೂ ಪಾದಯಾತ್ರೆ ಮಾಡುತ್ತೇವೆ. ಸಮೀರ್​, ಚಿನ್ನಯ್ಯ, ತಿಮರೋಡಿ ಸೇರಿದಂತೆ ಹಲವಾರು ಜನರ ಷಡ್ಯಂತ್ರದ ಮೂಲಕ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ. ಧರ್ಮಸ್ಥಳದಲ್ಲಿ ಧರ್ಮ ಇದೆ. ವೀರೇಂದ್ರ ಹೆಗಡೆಯವರ ಬೆಂಬಲಕ್ಕಾಗಿ ಜೆಡಿಎಸ್​ ಪಕ್ಷ ಇದೆ. ಅಪಪ್ರಚಾರ ಮಾಡಿದವರಿಗೆ ಸೂಕ್ತ ಕ್ರಮ ಕೈಗೋಳ್ಳಬೇಕು ಈ ಯಾತ್ರೆಯನ್ನು ನಡೆಸಲಾಗುತ್ತಿದೆ ಎಂದರು.

ರಾಜ್ಯ ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್​ನ ಎಲ್ಲ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್​ ಸದಸ್ಯರನ್ನೊಳಗೊಂಡು ಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪವಿತ್ರ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಸಲು ದೊಡ್ಡ ಷಡ್ಯಂತರ ನಡೆಯುತ್ತಿದೆ. ಇದರ ಹಿಂದೆ ಹಲವು ದುಷ್ಟ ಶಕ್ತಿಗಳು ಇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಇಂತಹ ಅಪಪ್ರಚಾರಕ್ಕೆ ಪುಷ್ಟಿ ನೀಡುತ್ತಿದೆ ಎಂಬ ಅನುಮಾನ ಭಕ್ತರಲ್ಲಿ ಮೂಡಿದೆ. ಅಮಾಯಕ ವ್ಯಕ್ತಿಯೊಬ್ಬ ಬುರುಡೆ ಹಿಡಿದುಕೊಂಡು ಬಂದ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಸರ್ಕಾರ ಎಸ್​ಐಟಿ ತನಿಖೆ ವಹಿಸುತ್ತದೆ. ಧರ್ಮಸ್ಥಳದ ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಮಾಡಲು ಕೆಲವರು ಹೊರಟಿದ್ದಾರೆ. ಇದನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡದೇ ಮೌನವಹಿಸಿದೆ. ಈ ಅಪಪ್ರಚಾರದ ಹಿಂದೆ ಇರುವ ಕಾಣದ ಕೈಗಳನ್ನು ಗುರುತಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಈರಣ್ಣ ಬಾಳಿಕಾಯಿ, ಗಿರೀಶ್​ ಸಂಶಿ, ನಿಂಗಪ್ಪ ಪ್ಯಾಟಿ, ತಿಪ್ಪಣ್ಣ ಹುಡೇದ, ದೇವಪ್ಪ ಮಲ್ಲಸಮುದ್ರ, ಕೆ. ಎಫ್​ ದೊಡ್ಡಮನಿ, ಸಂಗಪ್ಪ ಯರಹುಣಸಿ, ಚನ್ನಪ್ಪ ಹರಿಹರ, ಭಾಷಾಸಾಬ್​ ಬಾಗ್ವಾನ, ಎಂ. ಎಂ. ಜಾವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.