ಜಿಲ್ಲೆ

ಹಿಂದೂಗಳ ಜಾತಿಯಲ್ಲಿ ಕ್ರಿಶ್ಚಿಯನ್​ ಪದ ಸೇರ್ಪಡೆ ಖಂಡಿಸಿ ಸೆ. 18 ರಂದು ಪ್ರತಿಭಟನೆ: ಅಭಿನವ ಕೋಟ್ಟೂರೇಶ್ವರ ಶ್ರೀಗಳು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಕಾಲಂನಲ್ಲಿ ಕ್ರಿಶ್ಚಿಯನ್​ ಎಂಬ ಪದ ಸೇರಿಸಿದ್ದನ್ನು ಖಂಡಿಸಿ ಎಲ್ಲ ಸಮುದಾಯಗಳ ಮಠಾಧೀಶರು, ಮುಖಂಡರ ನೇತೃತ್ವದಲ್ಲಿ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಸೆ. 18 ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಮೂಲಕ ಜಿಲ್ಲಾಡಳಿತ ವತೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಅಭಿನವ ಕೋಟ್ಟೂರೇಶ್ವರ ಶ್ರೀಗಳು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಂದಾಜು 420 ಕೋಟಿ ವೆಚ್ಚದಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಲು ತಿರ್ಮಾನಿಸಿದೆ. ಆದರೆ, ತರಾತುರಿಯಲ್ಲಿ ಜನಗಣತಿ ಮಾಡುವ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಿದೆ. ಭಾರತ ತನ್ನದೇ ಆದ ಧರ್ಮ, ಭಾಷೆಯೊಂದಿಗೆ ಸಾಗುತ್ತಿದೆ. ರಾಜಕಾರಣಿಗಳು ಅಸ್ಥಿತ್ವಕ್ಕಾಗಿ ಧರ್ಮ, ಜಾತಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಹಿಂದೂ ಧರ್ಮದಲ್ಲಿ ಲಿಂಗಾಯತ, ಕುರುಬ, ಬ್ರಾಹ್ಮಣ, ಭೋವಿ ಸೇರಿದಂತೆ 46 ಕ್ಕೂ ಅಧಿಕ ಜಾತಿಗಳಲ್ಲಿ ಕ್ರಿಶ್ಚಿಯನ್​ ಎಂದು ನಮೂದು ಮಾಡಲಾಗಿದೆ. ಕ್ರಿಶ್ಚಿಯನ್​ ಎಂಬ ಕಾಲಂ ತಗೆಯುವವರೆಗೂ ಈ ಜನಗಣತಿಯನ್ನು ಮಾಡಬಾರದು. ಈ ಮೂಲಕ ಹಿಂದೂಗಳಲ್ಲಿ ಒಡಕು ಹುಟ್ಟಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ ಎಂದು ಆರೋಪಿಸಿದರು.

ಸಾಮರಸ್ಯ ವೇದಿಕೆ ಅಧ್ಯಕ್ಷ ರವಿಕಾಂತ ಅಂಗಡಿ, ಸೆ. 22ರಿಂದ 15 ದಿನಗಳ ಕಾಲ ದಸರಾ ನವರಾತ್ರಿಯ ಸಂದರ್ಭದಲ್ಲಿ ಹಿಂದೂಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಜಾತಿ ಜಾತಿ ಸಮೀಕ್ಷೆ ನೆಡೆಯಲಿದೆ. ಹಿಂದುಳಿದ ಆಯೋಗ ಸಮೀಕ್ಷೆಗೆ ಒಳಪಡಲಿರುವ 1400ಕ್ಕೂ ಮಿಕ್ಕ ಜಾತಿ, ಉಪಜಾತಿಗಳ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಿದೆ. ಸರ್ಕಾರದ ಈ ಜಾತಿಗಳ ಪಟ್ಟಿಯಲ್ಲಿ ಆನಧಿಕೃತವಾಗಿ ಹಿಂದೂ ಜಾತಿಗಳನ್ನು ಕೆಸ್ತ ಜಾತಿಗಳೆಂದು ಗುರುತಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ ಎಂದರು.

ಹಿಂದೂ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಅಡಗಿದೆ. ಹಿಂದೂ ಜಾತಿಗಳೊಳಗೆ ಮತಾಂತರಕ್ಕೆ ಕುಮ್ಮಕ್ಕು ನೀಡಿ, ರ್ದುಬಲಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ. ಕೆಸ್ತ ಹೆಸರಿನಲ್ಲಿ ಮತಾಂತರಿಗಳು ಹಿಂದೂ ಜಾತಿಗಳೊಳಗೆ ನುಸುಳಿ ಹಿಂದೂ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ ಎಂದು ಗಂಭೀರ ಆರೋಪ ಮಾಡಿದರು.

ಅನ್ನದಾನೇಶ್ವರ ಶಾಖಾಮಠ ನರಸಾಪೂರದ ಶ್ರೀಗಳು, ವೀರೇಶ್ವರ ಶಿವಾಚಾರ್ಯ ಶ್ರೀಗಳು, ಚನ್ನವಿರೇಶ್ವರ ಶ್ರೀಗಳು, ಜಗದೀಶ್​ ಎಸ್​. ಪಿ., ಭೀಮನಗೌಡ ಪಾಟೀಲ, ರಾಮಚಂದ್ರ ಮೋನೆ, ಕುಮಾರ ಬೆಂತೂರಮಠ, ವಂದನಾ ವರ್ಣೇಕರ, ಉಡಚಪ್ಪ ಹಳ್ಳಿಕೇರಿ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಇದ್ದರು.

ಕೊಟ್​:

ಹಿಂದೂ ಧರ್ಮದಲ್ಲಿ ಕ್ರೀಶ್ಚಿಯನ್​ ಧರ್ಮವನ್ನು ಎಳೆದು ತಂದು ರಾಜ್ಯ ಸರ್ಕಾರ ಹಿಂದೂಗಳ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. 46 ಜಾತಿಗಳ ಕಾಲಂ ನಲ್ಲಿ ಕ್ರಿಶ್ಚಿಯನ್​ ಅಂತ ಸೇರಿಸಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮತಾಂತಗೊಂಡವರು ಮತಾಂತರಗೊಂಡ ಧರ್ಮವನ್ನೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಮೂಲ ಧರ್ಮ ಸೇರಿಸಬಾರದು.

 ವೆಂಕಟೇಶ ಕುಲಕಣಿರ್, ಅಧ್ಯಕ್ಷರು

ಗದಗ ಜಿಲ್ಲಾ ಬ್ರಾಹ್ಮಣ ಸಮಾಜ

ಕೋಟ್​

ನಾವೆಲ್ಲರೂ ಒಂದಾಗಿದ್ದೇವೆ. ಆದರೆ, ಇಲ್ಲದಿರುವ ಕ್ರಿಶ್ಚಿಯನ್​ ಎಂಬ ಪದ ತಂದು ನಮ್ಮ ಒಗ್ಗಟ್ಟು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿದ್ದರೂ ಬಂಧುತ್ವದ ರೀತಿ ಬದುಕುತ್ತಿದ್ದೇವೆ. ಇದರ ನಡುವೆ ಕ್ರಿಶ್ಚಿಯನ್​ ಪದ ಸೇರಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಕ್ರಿಶ್ಚಿಯನ್​ ಪದ ತಗೆಯುವ ವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ.

ಡಾ. ಚನ್ನವಿರೇಶ್ವರ ಶ್ರೀಗಳು