ಜಿಲ್ಲೆ

ಸಂಚಾರ ದಟ್ಟಣೆ ನಿವಾರಿಸಿದ ಪೊಲೀಸರು

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಹಳೇ ಬಸ್​ ನಿಲ್ದಾಣದ ಮುಂಭಾಗದಲ್ಲಿನ ಮಾಳ ಶೆಟ್ಟಿ ಸರ್ಕಲ್​ ನಿಂದ ಟಾಂಗಾ ಕೂಟ ಸರ್ಕಲ್​ ವರೆಗೆ ಹಾದು ಹೋಗುವ ಸ್ಟೇಷನ್​ ರಸ್ತೆಗೆ ಸಂಪಕಿರ್ಸುವ ಪ್ರಮುಖ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಪೊಲೀಸರು ನಿವಾರಿಸಿದ್ದಾರೆ. ಈ ಮೊದಲು ಅತೀಕ್ರಮಣ ಮತ್ತು ಅಂಗಡಿ ಮುಂಗಟ್ಟುಗಳಿಂದ ದ್ವಿಚಕ್ರ ವಾಹನವು ತೆರಳದಂತ ಸ್ಥಿತಿ ನಿರ್ಮಾಣವಾಗಿತ್ತು. ಬುಧವಾರ ಏಕಾಏಕಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ನಗರದ ಹಳೇಯ ಬಸ್​ ನಿಲ್ದಾಣ ಮುಂಭಾಗದಲ್ಲೇ ಇರುವ ರಸ್ತೆ ಆಗಿದ್ದರಿಂದ ಪ್ರತಿ ನಿತ್ಯ ಜನದಟ್ಟಣೆಯಿಂದ ತುಂಬಿ ತುಳುಕಿತ್ತು. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಹಾಗೂ ನಗರವಾಸಿಗಳು ಈ ರಸ್ತೆಗೆ ತಮ್ಮ ವ್ಯಾಪಾರ ವಹಿವಾಟಿಗೆಂದು ಆಗಮಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಹಲವಾರು ಬೀದಿ ವ್ಯಾಪಾರಿಗಳು ತಾವು ಬಳಸುವ ತಳ್ಳುವ ಗಾಡಿಗಳೊಂದಿಗೆ ರಸ್ತೆಯದ್ಯಾಂತ ಎರೆಡೂ ಬದಿಗಳಲ್ಲಿ ವಸ್ತುಗಳು, ಟೀ ಬುಥ್​, ಹಣ್ಣು ತರಕಾರಿ ಅಂಗಡಿಗಳನ್ನು ಸ್ಥಾಪಿಸಿ ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡಿದ್ದರು.

ಹಲವಾರು ಬೀದಿ ವ್ಯಾಪಾರಿಗಳು ತಮ್ಮ ತಳ್ಳು ಗಾಡಿಗಳಲ್ಲಿ ಹಣ್ಣು, ತರಕಾರಿ, ಆಹಾರ ಪದಾರ್ಥಗಳು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ರಸ್ತೆಯ ಮಧ್ಯಭಾಗದಲ್ಲಿಯೇ ಇಟ್ಟಿದ್ದರು. ಇದರಿಂದ ಪಾದಚಾರಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಬಹಳ ಕಷ್ಟವಾಗುತ್ತಿತ್ತು. ಕೆಲಮೊಮ್ಮೆ ಈ ದಾರಿಯಲ್ಲಿ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿದ್ದವು.

ಈ ಪರಿಣಾಮವಾಗಿ ಪಾದಚಾರಿ, ಸಾರ್ವಜನಿಕರಿಗೆ ತೀವ್ರ ಕಿರಿಕಿರಿ, ತೊಂದರೆ ಆಗುತ್ತಿತ್ತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಗಿಜಿಗುಡುವ ದಾರಿಯ ಮಧ್ಯೆ ತಮ್ಮ ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಕಳೆದ ಕೆಲವು ತಿಂಗಳಿಂದ ಸಾರ್ವಜನಿಕರು ಗದಗ ಸಂಚಾರಿ ಪೊಲೀಸ್​ ಠಾಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸ್ಥಳಿಯರು ಹಾಗೂ ಹತ್ತಿರದ ಅಂಗಡಿ ಮಾಲೀಕರು ಸಹ ಈ ತೊಂದರೆಯಿಂದ ಬೇಸತ್ತು, ಕ್ರಮ ಕೈಗೊಳ್ಳುವಂತೆ ಸರಣಿ ಮನವಿಗಳನ್ನು ಸಲ್ಲಿಸಿದ್ದರು. ಕೊನೆಗೂ ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಗದಗ ಸಂಚಾರಿ ಪೊಲೀಸ್​ ಠಾಣೆಯ ಸಿಬ್ಬಂದಿ ಇಂದು ಕಾರ್ಯಪ್ರವೃತ್ತರಾಗಿ, ರಸ್ತೆ ಅತಿಕ್ರಮಣ ಮಾಡಿದ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ರಸ್ತೆಯ ಎರೆಡೂ ಬದಿಗಳಲ್ಲಿ ವೈಟ್​ ಟ್ಯಾಪಿಂಗ್​ ಲೈನ್​ ಹಾಕುವ ಮೂಲಕ, ಬಿಳಿ ರೇಖೆ ಒಳಗಡೆ ಬರದಂತೆ, ವ್ಯಾಪಾರಿಗಳು ತಮ್ಮ ವ್ಯಾಪಾರ ಮಾಡಬೇಕು ಎಂದು ಪೊಲೀಸರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.