ಜಿಲ್ಲೆ

ಗಾನಯೋಗಿ ಪಂಚಾರಿ ಸಂಗೀತ ಪರಂಪರಾ ಸಮ್ಮೇಳನಕ್ಕೆ ಚಾಲನೆ

Gadag - Shivanand Hiremath

ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು: ಸದಾಶಿವಾನಂದ ಶ್ರೀಗಳು

ವಿಜಯವಾಣಿ ಸುದ್ದಿಜಾಲ ಗದಗ

ತಂತಿ ತಾಳದ ಹಿಂದೆ ಜೀವನದ ಪರಮರಹಸ್ಯವಿದೆ. ಸಂಗೀತಕ್ಕೆ ರೋಗ ನಿವಾರಿಸುವ ಅದ್ಭುತ ಶಕ್ತಿ ಇದೆ. ಸಂಗೀತ ಸಾಧನೆಗೆ ಸಾಮರ್ಥ್ಯ ಬರುವದು. ತಪಸ್ಸು ಇದ್ದಾಗ ಅದು ಸಾಕಾರಗೊಳ್ಳುವದು. ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು ಎಂದು ಗದಗ ಶಿವಾನಂದ ಬ್ರಹನ್ಮಠದ ಸದಾಶಿವಾನಂದ ಶ್ರೀಗಳು ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಪಂಚಾರಿ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಜರುಗಿದ ಶಿವಾನುಭವ, ಗಾನಯೋಗಿ ಪಂಚಾರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾರಿ ಸಮ್ಮಾನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಸಿರುಕ್ರಾಂತಿಯ ಹೆಸರಿನಲ್ಲಿ ಹದ ಮತ್ತು ಲವತ್ತಾದ ಭೂಮಿಗೆ ರಾಸಾಯನಿಕ ಹಾಕಿ, ಭೂಮಿಯ ಬೆಳೆಯ ಅನ್ನವನ್ನುಂಡು ಮಾನವನ ಶರೀರವು ರೋಗದ ಆಲಯವಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದರು.

ಅಡುಗೆ ಮನೆಯಲ್ಲಿ ಮಸಾಲೆ ಸಾಮಗ್ರಿಳ ಡಬ್ಬಗಳು ಔಷಧ ಮಾತ್ರೆಯ ಡಬ್ಬಗಳಾಗಿ ಪರಿವರ್ತನೆಗೊಂಡಿವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯ ಮದ್ದು ಆಗಬೇಕಿದ್ದ ಅಡುಗೆ ಮನೆ ಔಷದಾಲಯ ಆಗುತ್ತಿವೆ. ಆದ್ದರಿಂದ ಭೂಮಿಯ ಲವತ್ತತೆ ಕಾಯ್ದುಕೊಂಡಲ್ಲಿ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಪೌಷ್ಠಿಕ ಆಹಾರ ಲಭ್ಯವಾಗಲು ಸಾಧ್ಯ. ನೆಮ್ಮದಿಯ ಬದುಕಿಗೆ ಆಹ್ಲಾದಕರ ಸಂಗೀತ ಅವಶ್ಯ ಎಂದರು.

ಕೆಲವು ಅತಿ ಬುದ್ಧಿವಂತರೆನ್ನಿಸಿಕೊಂಡವರು ಆಚಾರ ಹೇಳಲು ಬಲು ಶೂರರಾಗಿದ್ದಾರೆ. ವಾಸ್ತವಿಕ ಬದುಕಿನಿಂದ ಅವರು ಬಹು ದೂರ ಇದ್ದಾರೆ. ವೀರಶೈವ& ಲಿಂಗವಂತ, ರೇಣುಕಾಚಾರ್ಯ, ಪಂಚಪೀಠ, ಬಸವಧರ್ಮ ಎಂದು ಭಿನ್ನಾಭಿಪ್ರಾಯದಲ್ಲಿ ಕಾಲಹರಣ ಮಾಡುತ್ತಿದ್ದೇವೆ. ಅಂಗೈಯೊಳಗಿನ ಲಿಂಗ, ಹಣೆ ಮೇಲಿನ ವಿಭೂತಿ, ಕೊರಳಲ್ಲಿನ ರುದ್ರಾ ನಾವೆಲ್ಲರೂ ಒಂದೇ ಎಂದು ಹೇಳಲು ಸಾಕಲ್ಲವೆ ಎಂದು ಶ್ರೀಗಳು ಹೇಳಿದರು.

ಹರ್ಲಾಪೂರ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಸಂಗೀತ ಆತ್ಮಸಂತೃಪ್ತಿ ಭಾವವನ್ನು ಸ್ಪುರಿಸುವದು. ಭಾವ ತುಂಬಿ ಹಾಡುವ ಗಾಯಕನಿಗೆ ಆಗುವ ತೃಪ್ತಿಯು ಕೇಳುಗನಿಗೂ ಹೆಚ್ಚು ತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ. ಬದುಕಿನ ಬವಣೆ ಕಳೆಯುವ ಅದ್ಭುತ ತಾಕತ್ತು ಸಂಗೀತ ಕಲೆಗೆ ಇದೆ. ನಾಡಿನ ಅಂಧ, ಅನಾಥ, ಅಂಗವಿಕಲರ ಬದುಕಿಗೆ ಪಂಚಾರ ಪುಟ್ಟರಾಜ ಗವಾಯಿಗಳು ಬೆಳಕಾದವರು. ಭೀೆಯ ಪಾತ್ರೆ ಹಿಡಿದವರಿಗೆ ಅಯ ಪಾತ್ರೆ ನೀಡಿದ ಪುಣ್ಯಾತ್ಮರಾಗಿದ್ದಾರೆ ಎಂದರು.

ಅಡವೀಂದ್ರ ಮಠದ ಧರ್ಮದಶಿರ್ ಮಹೇಶ್ವರಸ್ವಾಮಿಗಳು ಸಮ್ಮುಖ ವಹಿಸಿದ್ದರು. ರಾಜಗುರು ಗುರುಸ್ವಾಮಿ ಕಲಿಕೇರಿ, ಎಸ್​. ಕೆ. ಮ್ಯಾಗೇರಿ, ಮಹಾಂತೇಶ ಸಜ್ಜನ, ಎಸ್​. ಕೆ. ನಾಲತ್ವಾಡಮಠ, ಸರಸ್ವತಿ ಸಜ್ಜನ, ಶಿವಬಸಯ್ಯ ಗಡ್ಡದಮಠ, ವಿ. ಎಂ. ಕುಂದ್ರಾಳಹಿರೇಮಠ ಇತರರು ಇದ್ದರು.