ವಿಜಯವಾಣಿ ಸುದ್ದಿಜಾಲ ಗದಗ
ಜನರಲ್ಲಿ ಪತ್ರಿಕೆಗಳನ್ನು ಕೊಂಡು ಓದುವ ಅಭಿರುಚಿ ಹುಟ್ಟಿಸಿದ ಸಂಪಾದಕ ಪಿ. ಲಂಕೇಶ ಕನ್ನಡ ನಾಡು ಕಂಡ ಅಪರೂಪದ ಪತ್ರಕರ್ತ. ಅವರು ಹುಟ್ಟು ಹಾಕಿದ ಲಂಕೇಶ ಪತ್ರಿಕೆ ಎಂಬತ್ತರ ದಶಕದಲ್ಲಿ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಯಶಸ್ಸಿನ ಹೊಸ ಪುಟಗಳನ್ನು ತೆರೆಯಿತು ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.
ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಕರ್ತ ಪಿ. ಲಂಕೇಶ ಅವರ 90ನೇ ಜಯಂತಿ ಕಾರ್ಯಕ್ರಮದಲ್ಲಿ ಲಂಕೇಶ ಬದುಕು ಬರಹ ಕುರಿತು ಮಾತನಾಡಿದರು.
ನಿರ್ಭೀತ ಬರವಣಿಗೆ ಮೂಲಕ ಅವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಅನ್ಯಾಯ, ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಲೇಖನಿಯ ಖಡ್ಗ ಬೀಸಿದ ಲಂಕೇಶ ಲೇಖನದ ಮಸಿಯ ಮೂಲಕ ಅವ್ಯವಸ್ಥೆಯ ವಿರುದ್ಧ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಲಂಕೇಶ ಸಾಹಿತಿ, ನಾಟಕಕಾರ, ಕವಿ, ಕಥೆಗಾರ, ಕಾದಂಬರಿಕಾರರಾಗಿ ಹೆಸರು ಗಳಿಸಿದ್ದಲ್ಲದೇ ವಿಶ್ವವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಪತ್ರಿಕಾ ರಂಗಕ್ಕೆ ಧುಮುಕಿದರು. ಹೊಸ ಬಗೆಯ ಬರವಣಿಗೆ ಮೂಲಕ ಕನ್ನಡ ನಾಡಿನಲ್ಲಿ ಪತ್ರಿಕೆಗಳನ್ನು ಮೆಚ್ಚುವ ಜಾಣ ಜಾಣೆಯರ ದೊಡ್ಡ ಪಡೆಯನ್ನೇ ನಿಮಿರ್ಸಿದರು. ಅಲ್ಲದೆ ಅನೇಕ ಹೊಸ ಬರಹಗಾರರನ್ನು ಬೆಳಕಿಗೆ ತಂದು ಕನ್ನಡ ಪತ್ರಿಕಾ ರಂಗದ ಹಿರಿಮೆ ಮೆರೆದರೆಂದು ಡಿ.ವಿ. ಬಡಿಗೇರ ಹೇಳಿದರು.
ಕಬ್ಬಿಗರ ಕೂಟದ ಅಧ್ಯ ಮನೋಹರ ಮೇರವಾಡೆ ಮಾತನಾಡಿ, ಲಂಕೇಶ ಪತ್ರಿಕೆ ಬೆಳೆದು ಬಂದ ರೀತಿ ಕನ್ನಡ ನಾಡಿನ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ. ಪಾಟೀಲ ಪುಟ್ಟಪ್ಪ, ರವಿ ಬೆಳಗೆರೆ, ಖಾದ್ರಿ ಶಾಮಣ್ಣ, ಟಿ.ಎಸ್. ಆರ್ ಮುಂತಾದ ಪತ್ರಕರ್ತರು ತಮ್ಮ ಬರಹಗಳ ಮೂಲಕ ಜನರಲ್ಲಿ ವಾಚನಾಭಿರುಚಿ ಬೆಳೆಸಿದರು.. ಲಂಕೇಶ ಅವರು ರಾಜಕೀಯದಲ್ಲಿ ಕೂಡ ಪತ್ರಿಕೆ ಮೂಲಕ ಕ್ರಾಂತಿಯನ್ನು ಹುಟ್ಟು ಹಾಕಿದರು. ರಾಜಕೀಯದಲ್ಲಿ ಬದಲಾವಣೆಗೆ ಲಂಕೇಶರ ಬರಹಗಳು ಪ್ರಭಾವ ಬೀರಿದವು ಎಂದರು.
ಸಾಹಿತಿ ಬಸವರಾಜ ಗಣಪ್ಪನವರ, ಕವಿ. ಬಿ.ಎಸ್. ಹಿಂಡಿ, ಸಾಮಾಜಿಕ ಚಿಂತಕ ಎಂ.ವಿ. ಕೆಂಭಾವಿಮಠ ಅವರು ದಶಕಗಳ ಹಿಂದಿನ ಲಂಕೇಶ ಪತ್ರಿಕೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಜೀರ ಸಂಶಿ, ಮಲ್ಲಿಕಾರ್ಜುನ ಪೂಜಾರ, ಜಗನ್ನಾಥ ಟಿಕಣದಾರ, ಮಲ್ಲಿಕಾರ್ಜುನ ಪೂಜಾರ, ಜಿ. ಎಸ್. ಹೊಂಬಳ, ನಾರಾಯಣಪೂರ, ಎಸ್. ಎಸ್. ಮಲ್ಲಾಪೂರ, ಟಿ. ಐ. ಗದಗಿನ, ಯು.ಎಸ್. ಹೊಂಬಳ, ಚೆನ್ನವಿರ ನಾಲ್ವಾಡ, ಶಿವಾನಂದ ಜೋಗಿ, ಜಯಶ್ರೀ ಮೇರವಾಡೆ ಇತರರು ಇದ್ದರು.