ಜಿಲ್ಲೆ

ಡ.ಸ.ಹಡಗಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ

Gadag - Shivanand Hiremath

ಗದಗ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, 2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ ಅಕ್ಟೋಬರ 2 ರಿಂದ ಪ್ರಾರಂಭವಾಗಿದ್ದು, ಡ.ಸ.ಹಡಗಲಿ ಗ್ರಾಮಸ್ಥರು ನರೇಗಾ ಕಾಮಗಾರಿ ಬೇಡಿಕೆಯನ್ನು ಕ್ಯೂ ಆರ್ ಕೋಡ್ ಸ್ಕಾನ್ ಮಾಡುವ ಮೂಲಕವೂ ಸಲ್ಲಿಸಬಹುದು ಅಂತಾ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಬಿ ಕಂದಕೂರ ಹೇಳಿದರು.

ಡ.ಸ ಹಡಗಲಿ ಗ್ರಾಮ ಪಂಚಾಯತಿ ಅಲ್ಲಿ ಉದ್ಯೋಗ ಖಾತ್ರ ನಡಿಗೆ ಸಬಲತೆಯಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನರೇಗಾ ಯೋಜನೆಯ ಗ್ರಾಮೀಣ ಬಾಗದ ಜನರಿಗೆ ಆಶಾಕಿರಣವಾಗಿದೆ. ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸುವ ಮೂಲಕ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ನರೇಗಾ ಯೋಜನೆಯಡಿ ಓರ್ವ ವ್ಯಕ್ತಿಯು 3 ಕಾಮಗಾರಿಗಳ ವರೆಗೆ ಅರ್ಜಿ ಸಲ್ಲಿಸಬಹುದು.ಒಟ್ಟು 5 ಲಕ್ಷದ ವರೆಗೂ ಲಾಭ ಪಡೆದುಕೊಳ್ಳಬಹುದು. ಯಾವುದೇ ಕಾಮಗಾರಿಯ ಲಾಭ ಪಡೆಯಲು ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.

ಇದರಿಂದ ಫಲಾನುಭವಿ ನೇರವಾಗಿ ಅರ್ಜಿ ಸಲ್ಲಿಸುವುದರಿಂದ ಮಧ್ಯವರ್ತಿಗಳು ಇಲ್ಲದೇ ಕಾಮಗಾರಿ ಕ್ರಿಯಾಯೋಜನೆ ಆಗುತ್ತದೆ ಈ ಎಲ್ಲಾ ಕಾಮಗಾರಿಗಳನ್ನು ಸಂಗ್ರಹಿಸಿ ಆಧ್ಯತಾ ಪಟ್ಟಿ ತಯಾರಿಸಿ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗುತ್ತದೆ ಇದರಿಂದಾಗಿ ನೈಜ ಫಲಾನುಭವಿಗಳಿಗೆ ಅವಕಾಶ ಸಿಗುವಂತಾಗಿದೆ ಎಂದರು. ವೈಯಕ್ತಿಕ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈಶ್ವರಗೌಡ ಪಾಟೀಲ ಮಾತಾನಾಡಿ ಗ್ರಾಮದಲ್ಲಿ ಈಗಾಗಲೇ ಐ.ಇ.ಸಿ ಚಟುವಟಿಕೆಗಳ ಮೂಲಕ ಮನೆ ಮನೆ ಭೇಟಿ ಮಾಡಿ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಕಾಮಗಾರಿಗಳನ್ನು ಸಂಗ್ರಹಿಸಲಾಗುತ್ತಿದ್ದು, ನರೇಗಾ ಫಲಾನುಭವಿಗಳು ಕಾಮಗಾರಿಗಳನ್ನು ಪೆಟ್ಟಿಗೆಯಲ್ಲಿ ಹಾಕಬಹುದು, ಈ ಕಾಮಗಾರಿಗಳನ್ನು ತಾಂತ್ರಿಕ ಸಂಯೋಜಕರು ಪೂರ್ವಭಾವಿಯಾಗಿ ವೀಕ್ಷಣೆ ಮಾಡಿ ಅಂದಾಜು ಪತ್ರಿಕೆ ತಯಾರಿಸುತ್ತಾರೆ. ಅದೇ ಕಾಮಗಾರಿಯನ್ನು ಕ್ರಿಯಾ ಯೋಜನೆಯಲ್ಲಿ ಇಡುವುದರಿಂದ ಎಲ್ಲಾ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬಹುದು ಎಂದರು.

ಗ್ರಾಮ ಪಂಚಾಯತ ಅಧ್ಯಕ್ಷ ಗಂಗಾಧರ ಕಮ್ಮಾರ, ಸದಸ್ಯರು, ತಾಲೂಕ ಪಂಚಾಯತಿ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಐಇಸಿ ಸಂಯೋಜಕ ಮಂಜುನಾಥ ಎಸ್, ಬಿ ಎಫ್ ಟಿ ಪ್ರಕಾಶ ಅಂಬಕ್ಕಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.