Gadag/ಗಜೇಂದ್ರಗಡ: ರಕ್ತ ಸಂಬಂಧಿಕರಲ್ಲಿ ಮದುವೆಯಾದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ದೈಹಿಕವಾಗಿ ನ್ಯೂನತೆ ಹೊಂದಿರುವವರು ಸಮಾಜದಲ್ಲಿ ಸಾಮಾನ್ಯರಂತೆ ಜೀವನ ನಡೆಸೋದು ಕಷ್ಟ. ದೈಹಿಕವಾಗಿ ನ್ಯೂನತೆ ಹೊಂದಿರುವವರಿಗೆ ಸಮಾಜದಲ್ಲಿ ಕರೆದು ಕೆಲಸ ಕೊಡುವುದಕ್ಕಿಂತ ಅವರಿಂದ ಏನು ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆಗಳನ್ನು ಕೇಳುವವರೇ ಹೆಚ್ಚು. ಹೀಗಿರುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ನ್ಯೂನತೆ ಹೊಂದಿರುವವರು ಗಜೇಂದ್ರಗಡ ತಾಲೂಕಿನಲ್ಲಿ ಶುರುವಾಗಿರುವ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಸಮಾನ್ಯರಂತೆ ಕೆಲಸ ಮಾಡುವುದರ ಮೂಲಕ ತಮ್ಮ ದೈಹಿಕ ನ್ಯೂನತೆಗೆ ಸವಾಲೆಸದಿದ್ದಾರೆ.
ಹೌದು, ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಇದ್ದೂರಲ್ಲೇ ಕೆಲಸ ದೊರೆಯಲಿ ಅಂತ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಆರಂಭವಾಗಿದೆ. ಗಂಡು-ಹೆಣ್ಣಿಗೆ ಸರಿಸಮಾನವಾಗಿ ಕೂಲಿಮೊತ್ತ ನೀಡುವ ನರೇಗಾ ಯೋಜನೆಯು ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯತಿ ನೀಡುವುದರ ಮೂಲಕ ಅವರ ಸ್ವಾವಲಂಬನೆ ಜೀವನಕ್ಕೆ ಮುತುವರ್ಜಿವಹಿಸಿದೆ. ತಾಲೂಕಿನ ಗುಳಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದ ೨೪ ವರ್ಷದ ಸುಮ್ಮವ್ವ ಬಾಲನ್ನವರ ಮತ್ತು ೨೨ ವರ್ಷದ ಬಸವ್ವ ಬಾಲನ್ನವರ ಎಂಬ ಬುದ್ದಿಮಾಂಧ್ಯ ಸಹೋದರಿಯರಿಬ್ಬರಿಗೆ ನರೇಗಾ ಸಮುದಾಯ ಕೆಲಸ ಜೀವನ ಕಟ್ಟಿಕೊಟ್ಟಿದೆ. ಸರಿಯಾಗಿ ಮಾತು ಬರದ ಮತ್ತು ದೈಹಿಕವಾಗಿ ನ್ಯೂನತೆ ಹೊಂದಿರುವ ಈ ಇಬ್ಬರು ಬುದ್ಧಿಮಾಂಧ್ಯ ಸಹೋದರಿಯರು ಪಾಲಕರ ನೆರವಿನಿಂದ ಕೆಲಸ ಮಾಡುತ್ತಿದ್ದಾರೆ.
ತಂದೆ ರಂಗಪ್ಪ ಬಾಲನ್ನವರ ಯೋಜನೆಯಡಿ ಬದು ನಿರ್ಮಾಣ ಕೆಲಸದಲ್ಲಿ ಅಗೆಯುವ ಮಣ್ಣನ್ನು ಬುದ್ದಿಮಾಂಧ್ಯ ಸಹೋದರಿಯರು ಪರಸ್ಪರ ಸಹಕಾರದಿಂದ ಮಣ್ಣನ್ನು ಬುಟ್ಟಿಗೆ ತುಂಬಿ ಹೊಲದ ಬದುವಿಗೆ ಒಡ್ಡು ಹಾಕುವ ಕೆಲಸ ಮಾಡುತ್ತಾರೆ. ಬಾಲ್ಯದಿಂದಲೇ ಬುದ್ದಿಮಾಂಧ್ಯತೆ ಹೊಂದಿರುವ ಈ ಇಬ್ಬರು ಸಹೋದರಿಯರಿಗೆ ಗ್ರಾಮದಲ್ಲಿ ಖಾಸಗಿಯಾಗಿ ಯಾರು ಕೆಲಸ ಕೊಟ್ಟಿಲ್ಲ. ತಾಯಿ ಲಲಿತವ್ವ ಬಾಲನ್ನವರು ಮನೆಕೆಲಸ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾಳೆ. ಬಡ ಕುಟುಂಬದಲ್ಲಿರುವ ಬಾಲನ್ನವರ ದಂಪತಿಗಳಿಗೆ ನರೇಗಾ ಕೆಲಸವೇ ಜೀವನಕ್ಕೆ ಆಧಾರ. ಬೇಸಿಗೆ ಅವಧಿಯಲ್ಲಿ ತಮ್ಮಿಬ್ಬರ ಮಕ್ಕಳನ್ನು ಕರೆದುಕೊಂಡು ನರೇಗಾ ಕೆಲಸದಲ್ಲಿ ದುಡಿಮೆ ಮಾಡುತ್ತಾರೆ. ನರೇಗಾದಿಂದ ಬರುವ ಕೂಲಿಮೊತ್ತವನ್ನು ಜೀವನ ಸಾಗಿಸಲು ಮತ್ತು ಮಕ್ಕಳಿಬ್ಬರ ಆರೋಗ್ಯ ತಪಾಸಣೆಗೆ ಬಳಸಿಕೊಳ್ಳುತ್ತೇವೆ ಅಂತ ಬುದ್ದಿಮಾಂಧ್ಯ ಸಹೋದರಿಯರ ತಂದೆ ರಂಗಪ್ಪ ತಿಳಿಸಿದರು.
ಸರಿಯಾಗಿ ಮಾತನಾಡಲು ಬಾರದ ಸುಮ್ಮವ್ವ ಮತ್ತು ಬಸವ್ವ ಇಬ್ಬರನ್ನು ವಿಚಾರಿಸಿದಾಗ ತೊದಲಿಸುತ್ತಾ ಮಾತನಾಡಿದ ಇಬ್ಬರು ಬುದ್ದಿಮಾಂಧ್ಯ ಸಹೋದರಿಯರು ನರೇಗಾ ಯೋಜನೆಯಡಿ ಕೆಲಸ ಕೊಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸುಮ್ಮವ್ವ ಅವರು ನಮಗೆ ಊರಿನಲ್ಲಿ ಯಾರು ಕೆಲಸ ಕೊಡಲ್ಲ. ತಂದೆ-ತಾಯಿಯ ಜೊತೆ ಒಡ್ಡಿನ ಕೆಲಸಕ್ಕೆ ಬರುತ್ತೇವೆ. ಅಪ್ಪ ಕಡಿಯುವ ಮಣ್ಣನ್ನು ಹೊತ್ತು ಹಾಕುತ್ತೇವೆ. ನಮಗೆ ದಿನಾನು ಕೆಲಸ ಕೊಡಿ ಅಂತ ಕಣ್ಣೀರು ತಗೆದರು. ಅಲ್ಲದೆ ನರೇಗಾದಿಂದ ಬಂದ ಕೂಲಿಮೊತ್ತವನ್ನು ಏನು ಮಾಡುತ್ತೀರಿ ಅಂತ ಪ್ರಶ್ನಿಸಿದಾಗ ಬ್ಯಾಂಕ್ ನಲ್ಲಿಟ್ಟು ದವಾಖಾನೆಗೆ ತೋರಿಸಿಕೊಳ್ಳುತ್ತೇವೆ ಅಂತ ವಿವರಿಸಿದರು.
ಇಬ್ಬರು ಬುದ್ದಿಮಾಂಧ್ಯ ಸಹೋದರಿಯರು ನರೇಗಾ ಯೋಜನೆಯನ್ನು ಹೀಗೆ ಸದುಪಯೋಗಪಡಿಸಿಕೊಂಡರೆ, ತಾಲೂಕಿನ ಗೋಗೇರಿ ಗ್ರಾಮ ಪಂಚಾಯತಿಯ ೪೫ ವರ್ಷದ ಬಸಮ್ಮ ಕೆರಿ ಬುದ್ದಿಮಾಂದ್ಯಳಾಗಿದ್ದರೆ, ೩೮ ವರ್ಷದ ಅಂದಪ್ಪ ಕೆರಿ ಕಾಲನ್ನು ಕಳೆದುಕೊಂಡಿದ್ದಾನೆ. ಇಬ್ಬರು ಬೇಸಿಗೆ ಅವಧಿಯಲ್ಲಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಬೇಡಿಕೆ ಸಲ್ಲಿಸುತ್ತಾರೆ. ಬೇಸಿಗೆ ಅವಧಿಯಲ್ಲಿ ಕನಿಷ್ಟ ೬೦ ದಿನಗಳ ಕಾಲ ದುಡಿದರೆ ೨೨೦೦೦ ಕೂಲಿಮೊತ್ತ ಬರುವ ಕಾರಣದಿಂದ ದೈಹಿಕ ನ್ಯೂನತೆ ಹೊಂದಿದ್ದರೂ ನರೇಗಾದ ಸಮುದಾಯ ಕೆಲಸದಲ್ಲಿ ದುಡಿದು ಸ್ವಾವಲಂಬನೆಯಾಗಿ ಬದುಕು ಕಟ್ಟಿಕೊಂಡಿದ್ದಾರೆ.
ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರೀಕರಿಗೆ, ಅಂಗವಿಕಲರಿಗೆ ರಿಯಾಯತಿ ಕೆಲಸ ನೀಡಲಾಗುವುದು. ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಇವರಿಗೆ ಕೆಲಸ ಕೊಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ನರೇಗಾ ಯೋಜನೆಯಡಿ ಇವರಿಗೆ ಅವರ ಸಾಮಾರ್ಥ್ಯದ ಆಧಾರದ ಮೇಲೆ ಕೆಲಸ ನೀಡಿ ದಿನವೊಂದಕ್ಕೆ ೩೭೦ ರೂಪಾಯಿ ಕೂಲಿಮೊತ್ತ ನೀಡುತ್ತೇವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರಿಗೆ ಇರುವ ಕೆಲಸದ ರಿಯಾಯತಿ ಬಗ್ಗೆ ಐಇಸಿ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರು ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ, ಗಜೇಂದ್ರಗಡ