ಗದಗ ನಗರೋತ್ಥಾನ ನಾಲ್ಕನೆ ಹಂತದ ಯೋಜನೆಗೆ ನಗರಸಭೆ ಆವರಣದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿತು. ಎಚ್​.ಕೆ. ಪಾಟೀಲ, ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಉಷಾ ದಾಸರ, ಚಂದ್ರು ಲಮಾಣಿ ಇದ್ದರು. 
ಜಿಲ್ಲೆ

ಪ್ರತಿ ಹಂತದಲ್ಲೂ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಯಬೇಕು: ಎಚ್​.ಕೆ. ಪಾಟೀಲ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಕಾಮಗಾರಿಗಳು ಕಳಪೆ ಆಗಿವೆ ಎಂದು ಗುತ್ತಿಗೆದಾರರಿಗೆ ಮೇಲಿಂದ ಮೇಲೆ ನೋಟೀಸ್​ ನೀಡುವುದರಿಂದ, ಗುತ್ತಿಗೆದಾರರನ್ನು ರದ್ದು ಗೊಳಿಸುವುದರಿಂದ ನಗರದಲ್ಲಿ ಅಭಿವೃದ್ಧಿ ಆಗುವುದಿಲ್ಲ. ಆಗಾಗ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸದೇ, ಕರ್ತವ್ಯ ನಿರ್ಲಕ್ಷ$್ಯ ವಹಿಸಿವುದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತದೆ. ಕಳಪೆ ಕಾಮಗಾರಿಯಲ್ಲಿ ಅವರದ್ದು ಪಾತ್ರ ಇರುತ್ತದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
ನಗರೋತ್ಥಾನ ನಾಲ್ಕನೇ ಹಂತದ ಯೋಜನೆಗೆ ಮಂಗಳವಾರ ನಗರಸಭೆ ಆವರಣದಲ್ಲಿ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಪ್ರತಿ ಹಂತದಲ್ಲೂ ನಗರೋತ್ಥಾನ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರನ್ನು ಮೇಲಿಂದ ಮೇಲೆ ಎಚ್ಚರಿಸುತ್ತಿರಬೇಕು. ಜಿಲ್ಲಾಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲಿಸುವ ನೇತೃತ್ವದ ವಹಿಸಬೇಕು ಎಂದರು.
ತಾಂತ್ರಿಕವಾಗಿ ಚುನಾವಣಾ ಪೂರ್ವದಲ್ಲೇ ನಗರೋತ್ಥಾನ ಯೋಜನೆಗೆ ಅನುಮೋದನೆ ದೊರೆತಿತ್ತು. ಆದರೆ, ಚುನಾವಣಾ ಹಿನ್ನೆಲೆ ಯೋಜನೆ ಸ್ಥಗಿತಗೊಂಡಿತ್ತು. ನಗರದ ಅಭಿವೃದ್ಧಿಗೆ, ಮೂಲಭೂತ ಸೌಕರ್ಯ ಹಾಗೂ ಜನರ ಕಲ್ಯಾಣಕ್ಕೆ ಮೊದಲಿನಿಂದಲೂ ಸಾಕಷ್ಟು ಹಣ ಹರಿದು ಬರುತ್ತಿದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಕೆಲಸದ ಗುಣಮಟ್ಟದ ಬಗ್ಗೆ ನಿಗಾ ವಹಿಸುವುದು ಆಗಿರಲಿಲ್ಲ. ಮತ್ತೊಮ್ಮೆ ಇಂತಹ ಅಚಾತುರ್ಯ ಜರುಗದಂತೆ ಕ್ರಮವಹಿಸಬೇಕು. ನಗರೋತ್ಥಾನ ಯೋಜನೆಗೆ ಹೆಚ್ಚಿನ ಹಣ ಹರಿದು ಬರಲು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹಾಗೂ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಪಾತ್ರ ದೊಡ್ಡದಿದೆ. ಹಾಗೂ ಇಂದು ಯೋಜನೆ ಅನುಷ್ಠಾನಗೊಳಲಿಸಲು ಸಿಎಂ ಸಿದ್ದರಾಮಯ್ಯ, ಸಚಿವ ಬೈರತಿ ಅವರ ಪಾತ್ರವು ಪ್ರಮುಖವಾಗಿದೆ ಎಂದು ಎಚ್​.ಕೆ. ಪಾಟೀಲ ಹೇಳಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಗರೋತ್ಥಾನದ 18.26 ಕೋಟಿಗೂ ಅಧಿಕ ಮೊತ್ತದ ಯೋಜನೆಗೆ ಇಂದು ಅಡಿಗಲ್ಲು ಸಮಾರಂಭ ನಡೆದಿದೆ. ಅಭಿವೃದ್ಧಿಗಾಗಿ ಪಕ್ಷಾತಿತವಾಗಿ ಎಲ್ಲರೂ ಒಗ್ಗೂಡಬೇಕು. ನಮ್ಮ ಅಧಿಕಾರ ಅವಧಿಯಲ್ಲಿ 5 ವರ್ಷ ಅಭಿವೃದ್ಧಿ ನಡಸಿ, ಕೊನೆಯ ಒಂದು ತಿಂಗಳು ರಾಜಕೀಯ ಮಾಡಬೇಕು ಎಂದು ಮಾಮಿರ್ಕವಾಗಿ ನುಡಿದರು.
ಯಾವ ಕಾಮಗಾರಿ ಅತೀ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯೋ ಅಂತಹ ಕಾಮಗಾರಿಗಳಿಂದ ಹೆಚ್ಚು ಹಣ ಪೋಲಾಗುತ್ತದೆ. ಇದರಿಂದ ರಾಷ್ಟ್ರೀಯ ಆಥಿರ್ಕ ಸಂಪನ್ಮೂಲ ನಷ್ಟವಾಗುತ್ತದೆ. ಇಂತಹ ಆಡಳಿತಾತ್ಮಕ ದೋಷಗಳನ್ನು ನಿವಾರಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ಗದಗ ನಗರ ಬೆಳೆಯುವ ಅವಕಾಶ ಇರುವಂತಹ ನಗರ. ಎಲ್ಲ ರಾಜಕೀಯ ಪಕ್ಷದ ಮುಖಂಡರು ಅಭಿವೃದ್ಧಿಗಾಗಿ ಒಂದಾಗಿ ಗದಗ ನಗರವನ್ನು ಅಭಿವೃದ್ಧಿ ಪಡಿಸಲು ಮುಂದಾಗೋಣ ಎಂದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ಅಭಿವೃದ್ಧಿ ಹಿನ್ನೆಲೆ ಜನರಿಗೆ ಸಾಕಷ್ಟು ಭರವಸೆ ನೀಡಿದ್ದೇವು. ನಗರೋತ್ಥಾನದಿಂದ ಆ ಭರವಸೆಗಳು ಈಡೇರಿಸಲು ಅನುಕೂಲ ಆಗಿದೆ. ಜನರ ಭರವಸೆಯನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಸುನಂದಾ ಬಾಕಳೆ, ವೈಶಾಲಿ ಎಂ.ಎಲ್​, ಚಂದ್ರು ಲಮಾಣಿ ಇತರರು ಇದ್ದರು.