ಅನವಶ್ಯಕ ಲೀಸ್ ನೀಡಲು ಕುತಂತ್ರ
ಶಿವಾನಂದ ಹಿರೇಮಠ ಗದಗ, ನಗರದ ಬಹುಕೋಟಿ ಮೌಲ್ಯದ ವಕಾರ ಸಾಲು ಆಸ್ತಿಯನ್ನು ಕಬಳಿಸಲು(ಗುತ್ತಿಗೆ) ತೆರೆಮರೆಯಲ್ಲಿ ಸದ್ದಿಲ್ಲದೆ ಹುನ್ನಾರ ನಡೆದಿದೆ. ಸಾರ್ವಜನಿಕ ಆಸ್ತಿಯಾಗಿರುವ ಜಾಗೆಯನ್ನು ಒಳ ಒಪ್ಪಂದದ ಮೂಲಕ ಮತ್ತೊಮ್ಮೆ ಗುತ್ತಿಗೆ ನೀಡಲು ಸೋಮವಾರ ಜರಗುವ ಸಾಮಾನ್ಯ ಸಭೆಯ ಇತರೆ ವಿಷಯದಲ್ಲಿ ಕೈಗೆತ್ತಿಗೊಳ್ಳಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ನಗರಸಭೆ ಆವರಣದಿಂದಲೇ ಹೊರಬಿದ್ದಿದೆ. ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕೆಲವೇ ಜನರಿಗೆ 5 ವರ್ಷದ ಅವಧಿಗೆ ಗುತ್ತಿಗೆ ನೀಡಿಲು ಉದ್ದೇಶಿಸಲಾಗಿದ್ದು, ಹಾವು ಬಡಿದು ಹದ್ದಿಗೆ ಹಾಕುವ ನಿಯಮ ಬಾಹಿರ ನಡಾವಳಿಯು ನಗರಸಭೆ ಆವರಣದಲ್ಲಿ ಸೃಷ್ಟಿಯಾಗಿದ್ದು ವಿಪರ್ಯಾಸ.
ಈ ಮೊದಲು ಇದೇ ಆಸ್ತಿಯನ್ನು ಉಳಿಸಿಕೊಳ್ಳಲು ನಗರಸಭೆ ಕೋರ್ಟ್ ಮೆಟ್ಟಿಲೇರಿತ್ತು. ಆಸ್ತಿ ವಿವಾದ ಪ್ರಕರಣದಲ್ಲಿ ಗೆದ್ದು ಮರಳಿ ಪಡೆದ ವಕಾರ ಆಸ್ತಿಯನ್ನು ಮತ್ತೇ ಲೀಸ್ ನೀಡುವ ದುರುದ್ದೇಶದ ಹಿಂದೆ ನಗರಸಭೆ ಆಯಕಟ್ಟಿನ ಅಧಿಕಾರಿಗಳು ಮತ್ತು ಪ್ರಭಾವಿ ನಗರಸಭೆ ಸದಸ್ಯರ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಏನಿದು ಪ್ರಕರಣ:
ಗದಗ ನಗರದ ಮುಖ್ಯರಸ್ತೆಯ ಭೂಮರೆಡ್ಡಿ ವೃತ್ತದ ಬಳಿ ಇರುವ 3782, 3783, 3786, 3796 ಸರ್ವೆ ನಂ. ನಲ್ಲಿ ಇರುವ ಅಂದಾಜು 34 ಎಕರೆ 32 ಗುಂಟೆಯಲ್ಲಿ ಇದ್ದ 54 ವಕಾರು ಸಾಲು (ಭೂ ಪ್ರದೇಶ)ಅನ್ನು ಈ ಹಿಂದೆ 99 ವರ್ಷಗಳ ಕಾಲ ನಗರದ ಹಲವರಿಗೆ ಅತೀ ಕಡಿಮೆ ದರದಲ್ಲಿ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರು ಭೂಮಿಯನ್ನು ಕೋಟ್ಯಂತರ ರೂ. ಮೌಲ್ಯಕ್ಕೆ ಮಾರಾಟ ಮಾಡಲು ಹುನ್ನಾರ ನಡೆಸಿದ ಹಿನ್ನೆಲೆ ಬೀಗಿ ಪೊಲೀಸ್ ಬಂದೂಬಸ್ತ ನಡುವೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಮರಳಿ ಪಡೆಯಲಾಯಿತು. 2019 ಜು.13 ರಿಂದ ಎರಡು ದಿನಗಳ ಕಾಲ 34 ಎಕರೆ ವಕಾರ ಸಾಲು ಸಂಪೂರ್ಣ ನೆಲಸಮಗೊಳಿಸಿ ಜಮೀನನ್ನು ನಗರಸಭೆಗೆ ಹಸ್ತಾಂತರಿಸಲಾಯಿತು. ನೆಲಸಮ ಮಾಡಿದ್ದನ್ನು ಪ್ರಶ್ನಸಿ ಗುತ್ತಿಗೆ ಪಡೆದವರು ಕೋರ್ಟ ಮೆಟ್ಟಿಲೇರಿದ್ದರು. ಹೈಕೋರ್ಟ್ ನಲ್ಲಿ ನಗರಸಭೆ ಪರವಾಗಿ ತೀರ್ಪು ಬಂದಿದೆ ಎನ್ನಲಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ಎಂ.ಜಿ. ಹಿರೇಮಠ ಕಾರಣದಿಂದ ನೂರಾರು ಕೋಟಿ ಬೆಲೆ ಬಾಳುವ ಭೂಮಿ ನಗರಸಭೆಗೆ ಉಳಿದುಕೊಂಡಿತ್ತು. ಅಂದಿನಿಂದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ನಗರಸಭೆ ಸುಪರ್ದಿಯಲ್ಲಿದೆ.
ಈಗಿರುವ ಕುತಂತ್ರ ಏನು?
ದಕ್ಷ ಅಧಿಕಾರಿಗಳಿಂದ ನಗರಸಭೆ ವ್ಯಾಪ್ತಿಗೆ ಉಳಿಸದುಕೊಂಡಿದ್ದ 34 ಎಕರೆ ವಕಾರು ಸಾಲನ್ನು ಮತ್ತೆ ಹಲವರಿಗೆ 5 ವರ್ಷಕ್ಕೆ ಗುತ್ತಿಗೆ ನೀಡಲು ಕುಂತಂತ್ರ ಹೆಣೆಯಲಾಗಿದೆ. ವಕಾರು ಸಾಲಿನಲ್ಲಿ ಈ ಹಿಂದೆ ವ್ಯವಹಾರ ನಡೆಸುತ್ತಿದ್ದವರು ಮತ್ತೆ ಲೀಸ್ ಪಡೆಯಲು ಕೆಲ ನಗರಸಭೆ ಸದಸ್ಯರ ಮೇಲೆ ಪ್ರಭಾವ ಬರುತ್ತಿದ್ದಾರೆ. ಈ ಪ್ರಕರಣದಲ್ಲಿ ಕೊಟ್ಟು ತೆಗೆದುಕೊಳ್ಳುವಿಕೆ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತೀವೆ. ಕೆಲ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಗುತ್ತಿಗೆ ಪಡೆಯುವರ ಪರವಾಗಿದ್ದು, ಕೆಲವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನಗರಸಭೆಯಲ್ಲಿ ಸೋಮವಾರ(ಅ.30) ನಡೆಯುವ ಸಾಮಾನ್ಯ ಸಭೆಯ ನಂತರ, ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯದಲ್ಲಿ ಗುತ್ತಿಗೆ ನೀಡುವ ಅಜೆಂಡಾ ಗೆ ಅನುಮತಿ ನೀಡುವ ಪೂರ್ವ ನಿಯೋಜಿತ ಯೋಜನೆ ಭಾನುವಾರವೇ ಚರ್ಚೆ ಆಗಿದೆ ಎನ್ನಲಾಗಿದೆ. ಭಾಗಶಃ ಕಾಂಗ್ರೆಸ್, ಬಿಜೆಪಿ ಸದಸ್ಯರ ಬಹುಮತ ಪಡೆಯಲು ಭಾನುವಾರವೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಕೆಲ ಕಾಂಗ್ರೆಸ್, ಬಿಜೆಪಿ ಸದಸ್ಯರು ಸಭೆಗೆ ಗೈರಾಗುವ ಮೂಲಕ ಬಹುಮತಕ್ಕೆ ಪರೋಕ್ಷವಾಗಿ ಬೆಂಬಲ ನೀಡುವ ಸಾಧ್ಯತೆ ಇದೆ.
ಇತರೆ ವಿಷಯ ಅಂದರೇನು?
ಜನರ ಅಗತ್ಯ, ಮೂಲಭೂತ ಸೌಕರ್ಯ, ಆರೋಗ್ಯ ಸೇರಿದಂತೆ ಅತ್ಯಗತ್ಯ ವಿಷಗಳನ್ನು ಸಾಮಾನ್ಯ ಸಭೆಯ ಇತರೆ ವಿಷಯಗಳಲ್ಲಿ ಚರ್ಚಿಸಲಾಗುತ್ತದೆ. ಇಲ್ಲಿ ಜನ ಸಾಮಾನ್ಯರ ಅಭಿವೃದ್ಧಿ, ನಗರದ ಅಭಿವೃದ್ಧಿ, ತುರ್ತು ವಿಷಯಗಳನ್ನು ಮಾತ್ರ ಚರ್ಚಿಸಲಾಗುತ್ತಿದೆ. ಆದರೆ, ಅನಗತ್ಯವಾಗಿ ಸಾರ್ವಜನಿಕ ಆಸ್ತಿಯನ್ನು ಅನುಕೂಲಸ್ಥರಿಗೆ ಗುತ್ತಿಗೆ ನೀಡುವಂತಹ ವಿಷಯ ಚರ್ಚೆ ತೆಗೆದುಕೊಳ್ಳುವುದು ನಿಯಮ ಬಾಹಿರವಾಗಿದೆ.
ಕೋಟ್:
ನಗರಸಭೆ ಆಸ್ತಿ ನಗರಸಭೆಗೆ ಉಳಿಯಬೇಕು. ಪ್ರಭಾವಿಗಳು ಈ ವರಗೂ ಈ ಆಸ್ತಿಯನ್ನು ಬಳಸಿದ್ದಾರೆ. ಭವಿಷ್ಯದಲ್ಲಿ ಸಾರ್ವಜನಿಕರಿಗೆ ಈ ಆಸ್ತಿ ಬಳಕೆ ಆಗಬೇಕೆ ವಿನಹ ಯಾರಿಗೂ ಗುತ್ತಿಗೆ ನೀಡಬಾರದು. ನೀಡಿದ್ದೇ ಆದರೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು.
- ರವಿಕಾಂತ ಅಂಗಡಿ.
ಅಧ್ಯಕ್ಷ, ಉತ್ತರ ಕರ್ನಾಟಕ ಮಹಾಸಭಾ.