- ಪ್ರಾದೇಶಿಕ ಆಯುಕ್ತರ ಅಂಗಳದಲ್ಲಿ ನಗರಸಭೆ ಚುನಾವಣೆ ಚೆಂಡು
- ಫೆ. 27ಕ್ಕೆ ಸಿಗಲಿದೆ ಎಲ್ಲದಕ್ಕೂ ಸ್ಪಷ್ಟತೆ
ನಗರಸಭೆ ಮೂವರು ಬಿಜೆಪಿ ಸದಸ್ಯರ ಅಮಾನತ್ತು ಆದೇಶವನ್ನು ರದ್ದು ಮಾಡಿರುವ ಧಾರವಾಡ ವಿಭಾಗೀಯ ಹೈಕೋರ್ಟ್ ಪೀಠ, ವಕಾರು ಸಾಲು ಲಿಸ್ ಅವಧಿ ವಿಸ್ತರಿಸುವ ಠರಾವಿಗೆ ಸಂಬಂಧಿಸಿದಂತೆ ಮೂಲ ದಾಖಲೆ ಪರಿಶೀಲಿಸಲು ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದೆ. ಜತೆಗೆ ಸೂಕ್ತ ಮತ್ತು ಸಮರ್ಥನೀಯ ದಾಖಲೆಗಳೊಂದಿಗೆ ಫೆ. 27 ಮಧ್ಯಾಹ್ನ 3 ಗಂಟೆ ಒಳಗಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಆದೇಶದಲ್ಲಿ ಸೂಚಿಸಲಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆ ಬಿಜೆಪಿ ಸದಸ್ಯರಿಗೆ ಮರಭೂಮಿಯಲ್ಲಿ ಓಯಾಸಿಸ್ ದೊರೆತಂತೆ ಆಗಿದ್ದು, ಮರಳು ಭೂಮಿಯಿಂದ ಕೃಷಿ ಭೂಮಿವರೆಗೂ ಸಾಗಲು ಫೆ. 27ರ ವರೆಗೂ ಕಾಯಬೇಕಿದೆ. ಒಂದೊಮ್ಮೆ ಫೆ.27 ರಂದು ಮಧ್ಯಾಹ್ನ 3 ಗಂಟೆ ಒಳಗಾಗಿ ಪ್ರಾದೇಶಿಕ ಕಚೇರಿಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ ಅಥವಾ ಸದಸ್ಯರು ಸಲ್ಲಿಸುವ ದಾಖಲೆಗಳು ಸೂಕ್ತ ವಲ್ಲದ ಮತ್ತು ಅಸಮರ್ತ ನೀಯ ಎಂದು ಪ್ರಾದೇಶಿಕ ಆಯುಕ್ತರು ಪರಿಗಣಿಸಿದ್ದೇ ಆದರೆ, ಮುಂದಿನ ಕ್ರಮ ಪ್ರಾದೇಶಿಕ ಆಯುಕ್ತರು ಕೈಗೊಂಡತೆ ನಡೆಯುತ್ತದೆ. ಸದಸ್ಯರ ದಾಖಲೆಗಳನ್ನು ಸಮರ್ಥನೀಯ ಎಂದು ಪರಿಗಣಿಸಿದರೆ, ಅಮಾನತ್ತು ಆದೇಶ ರದ್ದತಿಯಂತೆ ಮೂವರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಭವ ಹೆಚ್ಚಿದೆ. ಹೀಗಾಗಿ ಫೆ. 28ಕ್ಕೆ ಚುನಾವಣೆ ನಡೆಯುತ್ತಾ? ಚುನಾವಣೆ ಮೂಂದೂಡಲಾಗುತ್ತಾ? ಚುನಾವಣೆಯಲ್ಲಿ ಮತದಾನಕ್ಕೆ ಬಿಜೆಪಿಯ ಮೂವರು ಸದಸ್ಯರಿಗೆ ಅವಕಾಶ ದೊರೆಯುತ್ತಾ? ಹೀಗೆ ನಗರಾದ್ಯಂತ ಜನರ ಮನಸಲ್ಲಿ ಹುಟ್ಟಿಕೊಳ್ಳುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಫೆ. 27 ರಂದೇ ಸ್ಪಷ್ಟತೆ ಸಿಗಲಿದೆ.
ವಕಾರು ಸಾಲು ಗುತ್ತಿಗೆ ಅವಧಿ ವಿಸ್ತರಿಸುವ ಕುರಿತು ನಕಲಿ ಠರಾವು ಸೃಷ್ಟಿಸಿದ್ದಾರೆ. ಎಂಬ ಆರೋಪದ ಪ್ರಕರಣದಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಬಿಜೆಪಿ ನಗರಸಭೆ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ ಮತ್ತು ಗೊಳಪ್ಪ ಮುಷಿಗೇರಿ ಅವರನ್ನು ಅಮಾನತ್ತು ಮಾಡಿದ ಆದೇಶಿಸಿದ್ದರು. ಅಮಾನತ್ತು ಆದೇಶವನ್ನು ಪ್ರಶ್ನಿಸಿ ಮೂವರು ಬಿಜೆಪಿ ಸದಸ್ಯರು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತರು ಏಕಪಕ್ಷೀಯವಾಗಿ ಆದೇಶಿ ನೀಡಿದ್ದಾರೆ. ಕಕ್ಷಿದಾರರ ಅಭಿಪ್ರಾಯ ಕೇಳುವ ಅವಕಾಶ ಕಲ್ಪಿಸಿಲ್ಲ. ನೋಟೀಸ್ ನೀಡಿ ವಿಚಾರಣೆಗೆ ಕರೆದು ನಮ್ಮ ಅಭಿಪ್ರಾಯ ಕೇಳಿಲ್ಲ ಮತ್ತು ನಮ್ಮ ವಿರುದ್ಧವಾಗಿ ಕೋರ್ಟ ಸಲ್ಲಿಸಿದ ದಾಖಲೆಗಳ ಪರಿಶೀಲನೆಗೆ ಸಮಯ ನೀಡಿಲ್ಲ. ಅಮಾನತ್ತು ಆದೇಶವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಸದಸ್ಯರು ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಸದಸ್ಯರ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯವು ಸದಸ್ಯತ್ವ ಸ್ಥಾನದಿಂದ ಅಮಾನತ್ತು ಆದೇಶ ರದ್ದು ಮಾಡಿ, ಠರಾವು ಸಂಬಂಧಿತ ದಾಖಲೆಗಳನ್ನು ವರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ. ಸದಸ್ಯರ ವಿರುದ್ಧ ಕೊರ್ಟಗೆ ಸಲ್ಲಿಕೆ ಆಗಿರುವ ದಾಖಲೆಗಳ ಮೂಲ ಪ್ರತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಫೆ. 27 ರಂದು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಹೀಗಾಗಿ, ಫೆ. 27ರ ಸಂಜೆ ಸದಸ್ಯರ ಅಮಾನತ್ತು ಮತ್ತು ನಗರಸಭೆ ಚುನಾವಣೆ ಕುರಿತು ಮತ್ತೊಮ್ಮೆ ಸ್ಪಷ್ಟತೆ ಸಿಗಲಿದೆ. ಹೈಕೋರ್ಟ್ ಆದೇಶದಂತೆ ಮಂಗಳವಾರ ಸದಸ್ಯರ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಕೆ ಆದ ದಾಖಲೆಗಳ ಮೂಲ ಪ್ರತಿಗಳನ್ನು ಬಿಜೆಪಿ ಮೂವರು ಸದಸ್ಯರು ಮಂಗಳವಾರ ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಪ್ರಾದೇಶಿಕ ಆಯುಕ್ತರು ವಿಚಾರಣೆ ವೇಳೆ ಅಮಾನತ್ತು ಆದೇಶದಲ್ಲಿ ಮತ್ತು ಪೂಕರವಾಗಿ ಹಲವು ಸೃಷ್ಟಿಕರಣ ನೀಡಿದ್ದರು. ವಕಾರು ಸಾಲು ಗುತ್ತಿಗೆ ವಿಸ್ತರಿಸುವ ಯಾವು ಪ್ರಕರಣ ಸಂಬಂಧ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ ವಿರೋಧ ಹೇಳಿಕೆ ಆಧರಿಸಿ ಕೋರ್ಟಿನಲ್ಲಿ ಚಾರ್ಜ್ ಶೀಟಿ ಸಲ್ಲಿಕೆ ಆಗಿದೆ. ಹಾಗಾಗಿ ಮತ್ತೊಮ್ಮೆ ವಿಚಾರಣೆಗೆ ಅವಕಾಶ ಇಲ್ಲ. ಪ್ರಕರಣಕ್ಕೆ ತಡೆ ಕೋರಿ ಸದಸ್ಯರು ಕೋರ್ಟ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವೂ ಶಿರಸ್ಕರಿಸಿದೆ. ಈ ಹಿನ್ನೆಲೆ ಪೂರಕ ದಾಖಲೆಗಳನ್ನೊಳಗೊಂಡು ಅಮಾನತ್ತು ಆದೇಶ ನೀಡಲಾಗಿತ್ತು. ವಿಭಾಗೀಯ ಆಯುಕ್ತರು ವಿಚಾರಣೆ ವೇಳೆ ನಮ್ಮ ಮನವಿಯನ್ನು ಪುರಸ್ಕರಿಸದೇ ಏಕಪಕ್ಷೀಯ ಆದೇಶ ನೀಡಿದ್ದಾರೆ ಎಂದು ಪ್ರಶ್ನಿಸಿ ಸದಸ್ಯರು ಧಾರವಾಡ ಹೈಕೋರ್ಟ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಮೂವರು ಬಿಜೆಪಿ ಸದಸ್ಯರ ವಾದವನ್ನು ಸಮರ್ಥನೀಯ ಎಂದು ಫೆ. 27 ರಂದು ಪ್ರಾದೇಶಿಕ ಆಯುಕ್ತರು ಪರಿಗಣಿಸಿದರೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಬಹುದು. ಈಗಾಗಲೇ ಫೆ. 28 ರಂದು ಚುನಾವಣಾ ದಿನಾಂಕ ಗೋಷಣೆ ಆಗಿದ್ದು, ನಗರಸಭೆ ಚುನಾವಣೆ ನಡೆಸುವ ಕುರಿತು ಸೂಚನಾ ಪತ್ರವು(ನೋಟೀಸ್) ಮೂವರು ಸದಸ್ಯರಿಗೆ ತಲುಪದ ಹಿನ್ನೆಲೆ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಮೂವರು ಸದಸ್ಯರು ಕೋರ್ಟಿಗೆ ಮನವಿ ಸಲ್ಲಿಸಬಹುದು. ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕವನ್ನು ಮುಂದೂಡಬಹುದು ಅಥವಾ ಫೆ. 28 ರಂದೇ ಮತದಾನಕ್ಕೆ ಅವಕಾಶ ನೀಡಬಹುದು. ಒಂದು ವೇಳೆ ಸದಸ್ಯರ ದಾಖಲೆಗಳು, ವಾದವು ಸೂಕ್ತವಲ್ಲದ ಮತ್ತು ಅಸಮರ್ಥನೀಯ ಎಂದು ಪ್ರಾದೇಶಿಕ ಆಯುಕ್ತರು ಮತ್ತೊಮ್ಮೆ ತಮ್ಮ ಆ ದೇಶವನ್ನು ಪರಿಶೀಲಿಸಿ ಹೊರಡಿಸಬಹುದು.
ನ್ಯಾಯದ ಪರವಾಗಿ ಇದ್ದೇವೆ. ಕಾಂಗ್ರೆಸ್ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ನಮ್ಮ ವಿರುದ್ಧ ಕೆಲಸ ನಿರ್ವಹಿಸಿದ್ದಾರೆ. ಕಾನೂನು ಹೋರಾಟ ಮುಂದು ವರಿಸಲಿದ್ದೇವೆ
-ಚಂದ್ರು ಶಡಸದ, ಬಿಜೆಪಿ ನಗರಸಭೆ ಸದಸ್ಯ
ಬಿಜೆಪಿ ಸದಸ್ಯರು ತಪ್ಪೆಸಗಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗು ಗುತ್ತಿಗೆ ನೀಡಿದ್ದಾರೆ. ಶಪ್ಪಿಕಸ್ಥರಿಗೆ ಕಾನೂನು ಶಿಕ್ಷೆ ನೀಡಲಿದೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವನ್ನು ಸದ್ಬಳಕೆಗೆ ಚಲಾಯಿಸುತ್ತದೆ.
– ರವಿ ಕಮತರ, ಕಾಂಗ್ರೆಸ್ ನಗರಸಭೆ ಸದಸ್ಯ