ಜಿಲ್ಲೆ

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆದೇಶ ಪಾಲನೆ ಮಾಡಿದಂತೆ ಕಾಣುತ್ತಿಲ್ಲ

Gadag - Shivanand Hiremath
ಗದಗ: ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರ ಬಹುದಿನಗಳ ಬೇಡಿಕೆಯ ಮೀಸಲಾತಿ ಹೆಚ್ಚಳ ಮಾಡಿ ಒಳ ಮೀಸಲಾತಿ ನಿಡಿದ್ದ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮಾನ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಗದಗ ಜಿಲ್ಲಾ ಬಿಜೆಪಿ ಯುವ ‌ಮೊರ್ಚಾ ಜಿಲ್ಲಾಧ್ಯಕ್ಷ ಶ್ರೀ ಸಂತೋಷ ಅಕ್ಕಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರಕಟಣೆ ಮೂಲಕ ತಿಳಿಸಿದ ಅವರು, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನೂ ಸರಿಯಾಗಿ ಪಾಲಿಸಿದಂತೆ ಕಾಣುತ್ತಿಲ್ಲ. ಅದೇರೀತಿ ನ್ಯಾ.ನಾಗಮೋಹನ್ ದಾಸ್ ವರದಿಯನ್ನೂ ಸರಿಯಾಗಿ ಪಾಲಿಸಿದಂತಿಲ್ಲ ಎಂದು ಆಕ್ಷೇಪಿಸಿದ್ದಾರೆ. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಎ, ಬಿ, ಸಿ, ಡಿ, ಇ ಎಂದು 5 ವರ್ಗಗಳನ್ನು ಮಾಡಿದ್ದರು. ಅದನ್ನು ಇವರು ಎ, ಬಿ, ಸಿ ಎಂದು ಮಾಡಿದ್ದಾರೆ. ನರೇಂದ್ರ ಸ್ವಾಮಿ ಮೊದಲಾದವರ ಮೂಲಕ ನೀವೇ ವಿಂಗಡಣೆ ಮಾಡುವುದಾದರೆ, ಸರಕಾರ ಮತ್ತು ಸಿದ್ದರಾಮಯ್ಯನವರಿಗೆ ಜಸ್ಟಿಸ್ ಸದಾಶಿವ ಆಯೋಗ, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ನೂರಾರು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು.
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಅವರು ಪರಿಶಿಷ್ಟ ಜಾತಿ, ಪಂಗಡಗಳ ಕುರಿತು ಒಂದು ದಿಟ್ಟ ನಿರ್ಧಾರ ಮಾಡಿದ್ದರು. ಅವತ್ತು ಬೊಮ್ಮಾಯಿಯವರು ಪರಿಶಿಷ್ಟ ಜಾತಿಗೆ ಶೇ 15 ಇದ್ದುದನ್ನು ಶೇ 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಶೇ 3 ಇದ್ದುದನ್ನು ಶೇ 7ಕ್ಕೆ ಏರಿಕೆ ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯನವರು, ಒಳ ಮೀಸಲಾತಿಯ ಬಿಜೆಪಿ ಸರಕಾರದ ನಿರ್ಧಾರವನ್ನು ಯಾವುದೂ ಅನುಷ್ಠಾನ ಆಗಿಲ್ಲ; ಇವರು ಬೂಟಾಟಿಕೆ- ನಾಟಕ ಮಾಡುತ್ತಿದ್ದಾರೆ ಎಂದು ರಾಜ್ಯಾದ್ಯಂತ ಓಡಾಡಿ ಅಪಪ್ರಚಾರ ಮಾಡಿದ್ದರು ಎಂದು ಟೀಕಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಕೆ ಓಡಿ ಹೋಗುವ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕರು ಚರ್ಚೆ ಮಾಡಬೇಕೆಂದು ಕೋರಿದರೂ ಪಲಾಯನವಾದ ಮಾಡಿದ್ದಾರೆ. ಈ ಮೂಲಕ ಸದನಕ್ಕೆ ಅಗೌರವ ತೋರಿದ್ದಾರೆ ಎಂದರು.