ಜಿಲ್ಲೆ

ಮಾರ್ಚ್ 15ರಂದು ರಾಜ್ಯಾಧ್ಯಕ್ಷರಿಗೆ ಅಭಿನಂದನೆ, ಜಿಲ್ಲಾ ಶಾಖೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Gadag - Shivanand Hiremath
ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಗದಗ ವತಿಯಿಂದ ಎರಡನೇ ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ. ಎಸ್ ಷಡಕ್ಷರಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಗದಗ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾರ್ಚ್ 15ರಂದು ನಗರದ ಭೀಮಸೇನ ಜೋಶಿ ಕಲಾರಂಗ ಮಂದಿರದಲ್ಲಿ ಆಯೋಜನೆ ಮಾಡಲಾಗಿದೆ ಅಂತ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಹೇಳಿದರು.
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ. ಎಸ್ ಷಡಕ್ಷರಿ ಅವರು ಎರಡನೇ ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ನಂತರ ಮೊದಲ ಬಾರಿ ಗದಗ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಿಂದಿನ ರಾಜ್ಯಾಧ್ಯಕ್ಷರಿಗಿಂತ ಕ್ರಿಯಾಶಿಲರಾಗಿ ಸೇವೆ ಸಲ್ಲಿಸಿದ ಕೀರ್ತಿ ಸಿ. ಎಸ್ ಷಡಕ್ಷರಿ ಅವರಿಗೆ ಸಲ್ಲುತ್ತದೆ. ರಾಜ್ಯದ ಎಲ್ಲ ನೌಕರರನ್ನು ಮನವೊಲಿಸಿ ಯಶಸ್ವಿಯಾಗಿ ಸಂಘಟನೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಿದ್ದೇವೆ ಅಂತ ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ ನಗರದ ಮುಳಗುಂದ ನಾಕಾದಿಂದ ಧೋಬಿ ಘಾಟ್, ಟಿಪ್ಪು ಸರ್ಕಲ್ ಮಾರ್ಗವಾಗಿ ಬೈಕ್ ರ್ಯಾಲಿ ನಡೆಯಲಿದ್ದು, ಸುಮಾರು ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ 25ಕ್ಕೂ ಹೆಚ್ಚು ಕಾರುಗಳು, ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ನಂತರ ಜಿಲ್ಲಾಧಿಕಾರಿ ಕಛೇರಿಯಿಂದ ಭೀಮಸೇನ ಜೋಶಿ ರಂಗಮಂದಿರದ ವರೆಗೆ 101ಕುಂಭಮೇಳ ನಡೆಯಲಿದೆ. ಜಿಲ್ಲೆಯ ಎಲ್ಲ ಚುನಾಯಿತ ಸದಸ್ಯರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯದ್ಯಕ್ಷ ಸಿ. ಎಸ್ ಷಡಕ್ಷರಿ ನೆರವೇರಿಸಿ ಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ. ಎನ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಭರತ್ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬಿ ಸಂಕದ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ವಹಿಸಿಕೋಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಿ. ಟಿ ವಾಲ್ಮೀಕಿ, ಎಂ. ಎಂ ನಿಟ್ಟಾಲಿ, ಡಾ. ಬಸವರಾಜ ಬಳ್ಳಾರಿ, ಡಿ. ಎಸ್ ತಳವಾರ, ಸಿದ್ದಪ್ಪ ಲಿಂಗದಾಳ ಮತ್ತು ಮಾರುತಿ ಮಂಗಳಾಪುರ ಉಪಸ್ಥಿತರಿದ್ದರು.