ಗದಗ: ರಾಜ್ಯ ಸರ್ಕಾರದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಜೂನ್ 14 ರಿಂದ 16 ರವರೆಗೆ ಗದಗಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಜೂನ್ 14ರಂದು ಬೆಳಿಗ್ಗೆ 10ಗಂಟೆಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಹಾಗೂ ಮನವಿಗಳನ್ನು ಸ್ವೀಕರಿಸುವರು. ಸಂಜೆ 5.30 ರಿಂದ ಸಂಜೆ 6.30 ಗಂಟೆಯವರೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ವಿವಿಧ ಇಲಾಖೆಗಳೊಂದಿಗೆ ಆಯೋಜಿಸಲಾದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗದಗದಲ್ಲಿ ವಾಸ್ತವ್ಯ ಮಾಡುವರು.
ಜೂನ್ 15 ರಂದು ಬೆಳಿಗ್ಗೆ 9.45 ರಿಂದ 10.45 ಗಂಟೆಯವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿನ ಗದಗ ಬಾರ್ ಅಸೋಸಿಯೇಷನ್ ಹಾಲ್‍ದಲ್ಲಿ ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಕುರಿತು ಬಾರ್ ಅಸೋಷಿಯೇಷನ್ ಸದಸ್ಯರೊಂದಿಗೆ ಸಂವಾದ ನಡೆಸುವರು. ಬೆಳಿಗ್ಗೆ 11 ರಿಂದ 11.30 ರವರೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಹಾಗೂ ಬಾಕಿ ಉಳಿದ ಪ್ರಕರಣಗಳ ಕುರಿತು ಸಭೆ ನಡೆಸುವರು. ಬೆಳಿಗ್ಗೆ 11.30 ರಿಂದ ಬಾಕಿ ಉಳಿದ ಪ್ರಕರಣಗಳ ಕುರಿತು ಸಭೆ ಜರುಗಿಸಿ ಗದಗನಲ್ಲಿ ವಾಸ್ತವ್ಯ ಮಾಡುವರು.
ಜೂನ್ 16 ರಂದು ಬೆಳಿಗ್ಗೆ 10 ರಿಂದ 11 ರವರೆಗೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನ್ಯಾಯಾಲಯದ ಅಧಿಕಾರಿಗಳೊಂದಿಗೆ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆಯ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಪಾತ್ರ ವಿಷಯಗಳ ಕುರಿತು ಸಭೆ ಹಾಗೂ ಸಂವಾದ ನಡೆಸುವರು. ನಂತರ 11.15 ರಿಂದ 12.30 ರವರೆಗೆ ಲೋಕಾಯುಕ್ತ ಪೊಲೀಸ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಯಿಂದ ವಿವಿಧ ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡುವರು. ಸಂಜೆ 7.26 ಗಂಟೆಗೆ ಗದಗನಿಂದ ಬೆಂಗಳೂರಿಗೆ ಪ್ರಯಾಣ ಮಾಡುವರು ಎಂದು ಲೋಕಾಯುಕ್ತ ಕಚೇರಿಯ ರೆಜಿಸ್ಟ್ರಾರ್ ಉಷಾರಾಣಿ ತಿಳಿಸಿದ್ದಾರೆ.