ಗದಗ: ಜಿಲ್ಲಾಡಳಿತ ಭವನ ಹಾಗೂ ಲಕ್ಕುಂಡಿ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉತ್ಖನನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿದ್ಧರಾಮಯ್ಯ ಲಕ್ಕುಂಡಿ ಅಭಿವೃದ್ಧಿಗಾಗಿ ಕಳೆದ ಸಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾಧಿಕಾರ ರಚನೆ ಮಾಡಲಾಯಿತು. ಎಚ್. ಕೆ. ಪಾಟೀಲ ಅವರಿಗೆ ಪುರಾತತ್ವ, ಪ್ರಾಚ್ಯವಸ್ತುಗಳ ವಿಷಯದಲ್ಲಿ ಆಸಕ್ತಿ ಇದ್ದಿದ್ದರಿಂದ ಪ್ರಾಧಿಕಾರ ರಚನೆ ಮಾಡಲು ಪ್ರೇರಣೆ ದೊರೆಯಿತು. ಲಕ್ಕುಂಡಿ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ನೀಡಲಾಗುವುದು ಎಂದರು.
ಉತ್ಖನನಕ್ಕೆ ಚಾಲನೆ ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಬಯಲು ವಸ್ತು ಸಂಗ್ರಹಾಲಯ ವೀಸಿದರು. ಇದೇ ಸಂದರ್ಭದಲ್ಲಿ ಬಯಲು ವಸ್ತು ಸಂಗ್ರಹಾಲಯಕ್ಕೆ ಭೂಮಿ ನೀಡಿದ ಮಾಲೀಕರಿಂದ ಭೂ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಎಸ್.ವಿ. ಸಂಕನೂರು ಇತರರು ಇದ್ದರು.