ಗದಗ: ಮನುಷ್ಯನ ಮನೆ ನಿರ್ಮಾಣದ ದುರಾಸೆಯಿಂದಾಗಿ ಜನರ ಜೀವನಾಡಿಯಾದ ಕೆರೆಕಟ್ಟೆಗಳು ಬಲಿಯಾಗುತ್ತಿದ್ದು ಅವುಗಳಿಂದ ದೊರೆಯಬಹುದಾಗಿದ್ದ ಅಮೃತಕ್ಕೆ ಸಮನಾದ ಕುಡಿಯುವ ನೀರು ದೊರಕದಂತಾಗಿದೆ ಹಾಗೂ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸುತ್ತಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ, ಸ್ವದೇಶಿ ವಸ್ತು ಪ್ರಚಾರಕ ರುದ್ರಣ್ಣ ಗುಳಗುಳಿ ಹೇಳಿದರು.
ಅವರು ಭೀಷ್ಮಕೆರೆ ತೀರದಲ್ಲಿ ಕಬ್ಬಿಗರ ಕೂಟ ಏರ್ಪಡಿಸಿದ್ದ ಕೆರೆ ಹಬ್ಬ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಜನಪದ ಸಂಗೀತಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿಸರ್ಗದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವರ ವಿರುದ್ಧ ಜನಾಂದೋಲನ ನಡೆಯದೇ ಹೋದರೆ ಈ ಭೂಮಿ, ನೀರು, ಆರಣ್ಯ ಸಂಪತ್ತೆಲ್ಲ ಬರಿದಾಗಿ ಪರಿಸರ ಜೀವಿಸುವುದಕ್ಕೆ ಅಸಾಧ್ಯವಾಗುವ ಸಾಧ್ಯತೆಯಿದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಜನಜಾಗೃತಿ ಮೂಡಿಸಬೇಕಾಗಿದೆ. ಅಪಾರ ಜಲಸಂಪತ್ತಿಗೆ ಕಾರಣವಾದ ಕೆರೆಗಳು ನಮ್ಮ ಇತಿಹಾಸ ಕಾಲದಿಂದ ಜನಜೀವನದ ಅವಿಭಾಜ್ಯ ಅಂಗವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಬಗ್ಗೆ ನಿರ್ಲಕ್ಷ ಧೋರಣೆ ಬೆಳೆಯುತ್ತಿದೆ ಎಂದು ಅವರು ವಿಷಾದಿಸಿದರು.
ಕಬ್ಬಿಗರ ಕೂಟ ಗದಗ ಜಿಲ್ಲೆಯಲ್ಲಿ ಮರೆತು ಹೋದ ಸಂಸ್ಕೃತಿ ಪರಂಪರೆಯ ಕೆರೆಹಬ್ಬವನ್ನು ನಡೆಸುವ ಮೂಲಕ ಇತಿಹಾಸದ ಮರು ಸೃಷ್ಟಿಗೆ ಭಾಜನವಾಗಿದೆ. ಅಂತೆಯೇ ಇಂಥ ಮಹತ್ವಪೂರ್ಣ ಜಾನಪದ ಕಾರ್ಯಕ್ರಮ ರೂಪಿಸಿದ ಕಬ್ಬಿಗರ ಕೂಟದ ಪದಾಧಿಕರಿಗಳನ್ನು ಅವರು ಅಭಿನಂದಿಸಿದರು.
ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಅವರು ಕೆರೆ ಹಬ್ಬ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿ ಕೆರೆ ಕಟ್ಟೆಗಳನ್ನು ನಿರ್ಮಿಸುವುದು ಪವಿತ್ರ ಕಾರ್ಯವೆಂದು ನಮ್ಮಪೂರ್ವಜರು ಭಾವಿಸಿದ್ದರೆಂದು ಹೇಳಿದರು.
ಮುಖ್ಯ ಅತಿಥಿ, ನಿವೃತ್ತ ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ ಮಾತನಾಡಿ ಆಹಾರ ಬೆಳೆಯುವ ಕ್ಷೇತ್ರ ಕಡಿಮೆಯಾಗಿ ವಸತಿ ಕ್ಷೇತ್ರಗಳು ವಿಸ್ತಾರಗೊಳ್ಳುತ್ತಿದ್ದು ಇದರಿಂದ ಆಹಾರ ಬೆಳೆಯುವ ಪ್ರಮಾಣ ಕುಂಠಿತಗೊಳ್ಳುವ ಅಪಾಯವಿದೆ. ನೀರಿನ ಮಹತ್ವ ಸಾರುವ ಕೆರೆಗಳ ಬಗ್ಗೆ ಅರಿವು ಮೂಡಿಸುವ ಕೆರೆಹಬ್ಬ ಪರಿಕಲ್ಪನೆ ಸ್ವಾಗತಾರ್ಹವೆಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾಯವಾದಿ, ನೋಟರಿ ಮನೋಹರ ಮೇರವಾಡೆ ಮಾತನಾಡಿ ಕಬ್ಬಿಗರ ಕೂಟ ಸದಾ ಹೊಸ ಬಗೆಯ ಕಾರ್ಯಕ್ರಮ ರೂಪಿಸುತ್ತ ಜನಪರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಕಬ್ಬಿಗರ ಕೂಟದ ಸಾಹಿತ್ಯ, ಕಲೆ, ಸಂಸ್ಕೃತಿ ಸಂವರ್ಧನೆಗೆ ಸಹಕಾರ ನೀಡಿದವರನ್ನು ಅಭಿನಂದಿಸಿದರು.
ಅತಿಥಿಗಳಾಗಿ ವೇದಿಕೆಯಲ್ಲಿ ನಾಗಭೂಷಣ ಹಿರೇಮಠ, ಸಾಹಿತಿ ಬಸವರಾಜ ಗಣಪ್ಪನವರ, ಬಿ.ಎಸ್. ಹಿಂಡಿ, ಸುಭದ್ರಾ ಬಡಿಗೇರ, ಜಯಶ್ರೀ ಮೇರೆವಾಡೆ, ಮಂಜುಳಾ ಇಟಗಿ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಬ್ಬಿಗರ ಕೂಟದ ಸಹಯೋಗದಲ್ಲಿ ಧಾರವಾಡ ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗು.ರು. ಕಲ್ಮಠ ಹಾಗೂ ಸಂಗಡಿಗರು ಜಾನಪದ ಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ನಜೀರ ಸಂಶಿ ಸ್ವಾಗತಿಸಿದರು. ಬಿ.ಎಸ್. ಹಿಂಡಿ ವಂದಿಸಿದರು, ಮಂಜುಶ್ರೀ ಬಡಿಗೇರ ಕಾರ್ಯಕ್ರಮ ನಡೆಸಿಕೊಟ್ಟರು.
ಕೆರೆ ಹಬ್ಬ ಕಾರ್ಯಕ್ರಮದಲ್ಲಿ ಅಂದಾನೆಪ್ಪ ವಿಭೂತಿ, ರತ್ನಕ್ಕ ಪಾಟೀಲ, ಮಾರುತಿ ಗಣಾಚಾರಿ, ಗೀತಾ ಹೂಗಾರ, ಎಂ.ಜಿ. ಹೂಗಾರ, ಯು.ಎಸ್. ಹೊಂಬಳ, ಆರ್.ಪಿ. ನಾಗನೂರ, ರೇವಣಸಿದ್ಧಪ್ಪ ಹಾಳಕೇರಿ, ಆಯ್. ಟಿ. ಗದಗಿನ, ಬಸವರಾಜ ತೋಟಿಗೇರ, ಶಾಂತಾ ಗಣಪ್ನವರ, ಎ.ಬಿ.ಮೇಟಿ, ರಮೇಶ ಹತ್ತಿಕಾಳ, ಮಲ್ಲಿಕಾರ್ಜುನ ಪೂಜಾರ, ಎಂ.ವಿ.ಕೆAಬಾವಿಮಠ, ನಜೀಮಾಬೇಗಂ, ಜಯಶ್ರೀ ಅಂಗಡಿ, ಮೇಘಾ ಮುಧೋಳ, ಶಕುಂತಲಾ ಸಿಂಧೂರ, ಪ್ರಭಾವತಿ ಹಿರೇಮಠ, ಜಗನ್ನಾಥ ತಿಕಣದಾರ, ಪ್ರ.ತೋ. ನಾರಾಯಣಪೂರ ಮುಂತಾದವರು ಉಪಸ್ಥಿತರಿದ್ದರು.